ವಿದೇಶದಲ್ಲಿ ಬಂಧಿಯಾಗಿದ್ದ ಕಡಬದ ಯುವಕ ಬಿಡುಗಡೆ; ಇಂದು ಮಂಗಳೂರಿಗೆ!

ಕಡಬ: ಸೌದಿ ಅರೇಬಿಯಾದ ರಿಯಾದ್‌ನ ಜೈಲಿನಲ್ಲಿ ಬ್ಯಾಂಕ್‌ ಖಾತೆ ಹ್ಯಾಕರ್‌ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ಒಳಗಾಗಿ ಕಳೆದ 11 ತಿಂಗಳಿನಿಂದ ಬಂಧಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್‌ ಕೊನೆಗೂ ಬಂಧನ ಮುಕ್ತರಾಗಿ ಇಂದು ಊರಿಗೆ ಆಗಮಿಸಲಿದ್ದಾರೆ.

ಸೌದಿಯ ರಿಯಾದ್‌ನಿಂದ ಅಲ್ಲಿನ ಪೊಲೀಸರು ಚಂದ್ರಶೇಖರ್‌ ಅವರನ್ನು ಇಂದು ವಿಮಾನದಲ್ಲಿ ಮುಂಬಯಿಗೆ ಕಳುಹಿಸಿಕೊಡಲಿದ್ದು, ಅಲ್ಲಿಂದ ಅವರು ಬಹುತೇಕ ಸಂಜೆ ಸುಮಾರು ಏಳು ಗಂಟೆ ವೇಳೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.

ಸೌದಿ ಅರೇಬಿಯಾಕ್ಕೆ ಚಂದ್ರಶೇಖರ್ ಅವರು 2022ರಲ್ಲಿ ತೆರಳಿದ್ದರು. ಅಲ್ಲಿ ಅಲ್ಪಾನರ್‌ ಸೆರಾಮಿಕ್ಸ್‌ ಎಂಬ ಕಂಪೆನಿಯಲ್ಲಿ ಅವರು ಕೆಲಸದಲ್ಲಿದ್ದರು. 2022ರ ನವೆಂಬರ್‌ನಲ್ಲಿ ಅವರು ಮೊಬೈಲ್‌ ಮತ್ತು ಸಿಮ್‌ ಖರೀದಿಗೆ ರಿಯಾದ್‌ನ ಅಂಗಡಿಗೆ ಭೇಟಿ ನೀಡಿ,ಅಲ್ಲಿ ಅರ್ಜಿಯೊಂದಕ್ಕೆ ಎರಡು ಬಾರಿ ಸಹಿ ಮತ್ತು ಬೆರಳಚ್ಚು ಸಹಿ ನೀಡಿದ್ದರು. ನಂತರ ಅವರಿಗೆ ಒಂದು ವಾರಗಳ ನಂತರ ಅರೇಬಿಕ್‌ ಭಾಷೆಯಲ್ಲಿ ಅವರ ಹೊಸ ದೂರವಾಣಿ ಸಂಖ್ಯೆಗೆ ಸಂದೇಶವೊಂದು ಬಂದಿತ್ತು.



































 
 

ಚಂದ್ರಶೇಖರ್‌ ಅವರು ಅದನ್ನು ತೆರೆದು ನೋಡಿದ್ದರು. ನಂತರ ಎರಡು ದಿನಗಳ ಬಳಿಕ ದೂರವಾಣಿ ಕರೆಯೊಂದು ಬಂದು ಹೊಸ ಸಿಮ್‌ ಕಾರ್ಡ್ ಬಗ್ಗೆ ಮಾಹಿತಿ ಕೇಳಲಾಗಿತ್ತು. ಈ ಸಮಯದಲ್ಲಿ ಬಂದ ಒಟಿಪಿಯನ್ನು ಅವರು ಕರೆ ಮಾಡಿದ ವ್ಯಕ್ತಿಗೆ ತಿಳಿಸಿದ್ದರು. ನಂತರ ಒಂದು ವಾರಗಳ ಬಳಿಕ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್‌ ಅವರನ್ನು ಬಂಧಿಸಿದ್ದರು.

ಬಂಧನದ ಕಾರಣ ತಿಳಿದಾಗ ಚಂದ್ರಶೇಖರ್ ಅವರಿಗೆ ಆಘಾತವಾಗಿತ್ತು. ಚಂದ್ರಶೇಖರ್‌ಗೆ ತಿಳಿಯದಂತೆ ಅಲ್ಲಿನ ಬ್ಯಾಂಕೊಂದರಲ್ಲಿ ಚಂದ್ರಶೇಖರ್ ಅವರ ಹೆಸರಿನಲ್ಲಿ ಹ್ಯಾಕರ್‌ಗಳು ಖಾತೆ ತೆರೆದು, ಈ ಖಾತೆಗೆ ಅಲ್ಲಿನ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ರಿಯಲ್‌ ಹಣವನ್ನು ಜಮೆ ಮಾಡಲಾಗಿತ್ತು. ಈ ಹಣವು ಸ್ವಲ್ಪ ಸಮಯದ ನಂತರ ಆ ಖಾತೆಯಿಂದ ಬೇರೆ ಯಾವುದೋ ದೇಶದ ಒಂದು ಬ್ಯಾಂಕ್ ಖಾತೆಗೂ ವರ್ಗಾವಣೆಯಾಗಿತ್ತು. ಈ ಕಾರಣದಿಂದ ಹಣ ಕಳೆದುಕೊಂಡ ಮಹಿಳೆಯು ಚಂದ್ರಶೇಖರ್‌ ಅವರ ಖಾತೆಗೆ ಹಣ ಜಮೆಯಾಗಿರುವುದನ್ನು ಗಮನಿಸಿ ಸೌದಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ವಂಚನೆ ಆರೋಪದಡಿ ಚಂದ್ರಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದರು.

ಚಂದ್ರಶೇಖರ್‌ ಬಂಧನವಾದ ವಿಷಯವನ್ನು ಅವರ ಗೆಳೆಯರು ಕಡಬದಲ್ಲಿರುವ ಅವರ ಮನೆಯವರಿಗೆ ತಿಳಿಸಿದ್ದರು. ಜೈಲಿನಲ್ಲಿ ಇರುವ ವೇಳೆ ದಿನದಲ್ಲಿ ಕೇವಲ 2 ನಿಮಿಷ ಮಾತ್ರ ಚಂದ್ರಶೇಖರ್ ಅವರಿಗೆ ದೂರವಾಣಿ ಕರೆ ಮಾಡಲು ಅವಕಾಶ ನೀಡಲಾಗಿತ್ತು. ಮಾತ್ರವಲ್ಲದೆ ಅಲ್ಲಿನ ತನ್ನ ಸ್ಥಳೀಯ ಸ್ನೇಹಿತರಿಗೂ ಅವರನ್ನು ಭೇಟಿಯಾಗಲು ಅವಕಾಶವಿರಲಿಲ್ಲ.

ಈ ನಡುವೆ ಚಂದ್ರಶೇಖರ್‌ ಅವರ ಸ್ನೇಹಿತರು ಸುಮಾರು 10 ಲಕ್ಷ ರೂಪಾಯಿ ಹಣ ಸಂಗ್ರಹಿಸಿ ಅಲ್ಲಿನ ವಕೀಲರಿಗೆ ನೀಡಿದ್ದರು. ವಂಚನೆಗೊಳಗಾಗಿ ಹಣ ಕಳೆದುಕೊಂಡ ಮಹಿಳೆಗೆ ಸುಮಾರು 6 ಲಕ್ಷ ರೂಪಾಯಿ ಹಣವನ್ನು ಪಾವತಿಸಲಾಗಿತ್ತು. ಆದರೂ ಬಿಡುಗಡೆ ಮಾತ್ರ ಸಾಧ್ಯವಾಗಿರಲಿಲ್ಲ. ಮಾಧ್ಯಮ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರು ಇದ್ದ ಅಲ್ಲಿನ ಕಂಪನಿ ಚಂದ್ರಶೇಖರ್‌ ಅವರ ಬಿಡುಗಡೆಗೆ ಪ್ರಯತ್ನ ಆರಂಭಿಸಿತು. ಮಾತ್ರವಲ್ಲದೆ ಇದಕ್ಕಿಂತಲೂ ಹೆಚ್ಚಾಗಿ ಉಡುಪಿಯ ನಿವಾಸಿ ಪ್ರಸ್ತುತ ಸೌದಿಯಲ್ಲಿರುವ ಪ್ರಕಾಶ್ ಎಂಬವರು ಮತ್ತು ಚಂದ್ರಶೇಖರ್ ಅವರ ಗೆಳೆಯರೂ ಅವರ ಬಿಡುಗಡೆಗೆ ನಿರಂತರ ಪ್ರಯತ್ನ ಮಾಡುತ್ತಿದ್ದರು.ಈ ಪ್ರಯತ್ನಗಳ ಫಲವಾಗಿ ಇದೀಗ ಚಂದ್ರಶೇಖರ್ ಅವರ ಬಿಡುಗಡೆ ಸಾಧ್ಯವಾಗಿದೆ.

ಚಂದ್ರಶೇಖರ್‌ ಅವರಿಗೆ ಕಳೆದ ಜನವರಿಯಲ್ಲಿ ಊರಿನಲ್ಲಿ ಮದುವೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಮದುವೆಯ ದಿನಾಂಕವೂ ಅಂತಿಮವಾಗಿತ್ತು. ಆ ಸಿದ್ಧತೆಯಲ್ಲಿರುವಾಗಲೇ ಸೌದಿಯಲ್ಲಿ ಅವರ ಬಂಧನವಾಗಿತ್ತು.

ಈ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ ಚಂದ್ರಶೇಖರ್ ಅವರ ಅಣ್ಣ ಹರೀಶ್‌, ತಮ್ಮ ಚಂದ್ರಶೇಖರ್ ಅವರು ಇಂದು ಸೌದಿ ಜೈಲಿನಿಂದ ಬಿಡುಗಡೆಯಾಗಿ ಸಂಜೆ ಸುಮಾರು ಏಳು ಗಂಟೆ ವೇಳೆಗೆ ಮಂಗಳೂರು ತಲುಪಲಿದ್ದಾರೆ.ಅವರ ಅಮ್ಮ ಸೇರಿದಂತೆ ನಾವೆಲ್ಲರೂ ಇಂದು ಅತೀವ ಸಂತೋಷದಲ್ಲಿದ್ದೇವೆ. ನಮಗೆ ಸೌದಿಯಲ್ಲಿರುವ ಉಡುಪಿಯ ಪ್ರಕಾಶ್ ಎಂಬವರು ಮತ್ತು ಚಂದ್ರಶೇಖರ್ ಅವರ ಹಲವು ಗೆಳೆಯರು ತುಂಬಾ ಸಹಾಯ ಮಾಡಿದ್ದಾರೆ. ಅವರೆಲ್ಲರ ನೆರವು ಇಲ್ಲದಿದ್ದರೆ ಚಂದ್ರಶೇಖರ್ ಅವರ ಬಿಡುಗಡೆ ಸಾಧ್ಯವಾಗುತ್ತಿರಲಿಲ್ಲ. ಅವರಿಗೆಲ್ಲಾ ನಾವು ಸದಾ ಅಭಾರಿಯಾಗಿದ್ದೇವೆ. ಇದರಲ್ಲಿ ಪ್ರಕಾಶ್ ಎಂಬವರ ಶ್ರಮ ಅಪಾರವಿದೆ. ಅವರು ಜೈಲಿಗೆ ಭೇಟಿಯಾಗಿ ಚಂದ್ರಶೇಖರ್ ಅವರಿಗೆ ಸಮಾಧಾನ ಹೇಳುತ್ತಿದ್ದರು. ನಿನ್ನೆಯೂ ಪ್ರಕಾಶ್ ಅವರ ಶ್ರಮ ಇಲ್ಲದಿದ್ದರೆ ಚಂದ್ರಶೇಖರ್ ಅವರ ಬಿಡುಗಡೆ ಇನ್ನೂ ಒಂದು ವಾರ ತಡ ಆಗ್ತಾ ಇತ್ತು. ಅವರಿಗೆ ಮತ್ತು ಅವರ ಜೊತೆಗೆ ಇರುವ ಗೆಳೆಯರ ಬಳಗಕ್ಕೆ, ಬಿಡುಗಡೆಗೆ ಶ್ರಮಿಸಿದ ಎಲ್ಲರಿಗೂ ನಾವು ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top