ಪುತ್ತೂರು: ಬಜರಂಗದಳ ಕಾರ್ಯಕರ್ತರ ಮೇಲೆ ಗಡಿಪಾರು ನೋಟೀಸ್ ಜಾರಿ ಮಾಡಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ತಿಕ್ಕುವ ಹಿಂದೂ ವಿರೋಧಿ ಆಡಳಿತ ವ್ಯವಸ್ಥೆಯ ವಿರುದ್ಧ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಬೃಹತ್ ಪ್ರತಿಭಟನೆ ಸೋಮವಾರ ಆಡಳಿತ ಸೌಧದ ಎದುರಿರುವ ಜೈ ಜವಾನ್ ಸ್ಮಾರಕದ ಬಳಿ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ಮಾತನಾಡಿ, ದೇಶದ ಪರವಾಗಿ ಕೆಲಸ ಮಾಡುತ್ತಿರುವ, ದೇಶದ ಸಾಂಸ್ಕೃತಿಕತೆಯ ಪ್ರತೀಕವಾದ ಗೋವಿನ ರಕ್ಷಣೆ, ಹಿಂದೂ ಹೆಣ್ಣು ಮಕ್ಕಳ ರಕ್ಷೆಯಲ್ಲಿ ತೊಡಗಿಕೊಂಡಿರುವ ಬಜರಂಗದಳ ಕಾರ್ಯಕರ್ತರನ್ನು ಗಡಿಪಾರಿಗೆ ಆದೇಶಿಸಿರುವುದು ಖಂಡನೀಯ. ಜಿಹಾದಿ, ಭಯೋತ್ಪಾದಕರಂತಹ ರಾಷ್ಟ್ರದ್ರೋಹದ ಕೆಲಸ ಮಾಡುವವರನ್ನು ಗಡಿಪಾರು ಮಾಡಿ. ಅದನ್ನು ಬಿಟ್ಟು ದೇಶ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಬಜರಂಗದಳ ಕಾರ್ಯಕರ್ತರನ್ನು ಈ ರೀತಿಯ ಶಿಕ್ಷೆಗೆ ಗುರಿಪಡಿಸಿದರೆ ಯಾವುದೇ ಹೋರಾಟಕ್ಕೆ ನಾವು ಸಿದ್ಧ. ತಕ್ಷಣ ಗಡಿಪಾರು ವಿಚಾರದ ಕುರಿತು ಮತ್ತೊಮ್ಮೆ ಚರ್ಚೆ ನಡೆಸಿ ಗಡಿಪಾರು ಹಿಂಪಡೆಯಬೇಕು ಎಂದು ಆಗ್ರಹಿಸಿದ ಅವರು, ಇದಕ್ಕೆ ಸೂಕ್ತ ನ್ಯಾಯ ಸಿಗದಿದ್ದಲ್ಲಿ ಗಡಿಪಾರು ಯಾರೆನ್ನೆಲಾ ಮಾಡಬೇಕು ಎಂಬ ಪಟ್ಟಿಯನ್ನು ನಾವು ನೀಡುತ್ತೇವೆ. ಅವರನ್ನು ಗಡಿಪಾರು ಮಾಡಿ ಎಂದು ಆಗ್ರಹಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಐದು ವರ್ಷದ ಹಿಂದೆ ಕಾಂಗ್ರೆಸ್ ಸರಕಾರ ಏನು ಮಾಡುತ್ತಿತ್ತು. ಅದನ್ನು ಅಧಿಕಾರಕ್ಕೆ ಬಂದು ಪುನರಪಿ ಮಾಡಲು ಹೊರಟಿದೆ. ಗಡಿಪಾರಿನಂತಹ ಶಿಕ್ಷೆ ವಿಧಿಸಿ ಹಿಂದೂಗಳ ಮನಸ್ಥೈರ್ಯವನ್ನು ಕುಸಿಯುವಂತಹ ಕೆಲಸ ಮಾಡುತ್ತಿದೆ. ಈ ಕುರಿತು ಜಿಲ್ಲಾಧ್ಯಕ್ಷರ ಬಳಿ ಮಾತನಾಡಿ, ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ನ್ಯಾಯ ಒದಗಿಸುವ ಕೆಲಸ ಮಾಡಲಿದ್ದೇವೆ. ಈ ವಿಚಾರವನ್ನು ಅಧಿಕಾರಿಗಳು ಮತ್ತೊಮ್ಮೆ ಮರು ಪರಿಶೀಲಿಸಿ ಗಡಿಪಾರಿನ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿಶೋರ್ ಬೊಟ್ಯಾಡಿ, ಬಿಜೆಪಿ ಮುಖಂಡರಾದ ಜೀವಂಧರ್ ಜೈನ್, ಯುವರಾಜ ಪೆರಿಯತ್ತೋಡಿ, ಬಜರಂಗದಳದ ಶ್ರೀಧರ್ ತೆಂಕಿಲ ಮತ್ತಿತರರು ಪಾಲ್ಗೊಂಡಿದ್ದರು. ವಿಶಾಖ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.