ಪುತ್ತೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ಗ್ರಾಮ ಸಾಹಿತ್ಯ ದಶ ಸಂಭ್ರಮ ಕಾರ್ಯಕ್ರಮ ನ. 25ರಂದು ಬಜತ್ತೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.
ಪುತ್ತೂರು ಶಿಕ್ಷಣ ಇಲಾಖೆ, ಬಜತ್ತೂರು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜನೆಯೊಂದಿಗೆ ಮಿತ್ರಂಪಾಡಿ ಜಯರಾಮ ರೈ ಅವರ ಪೋಷಕತ್ವದಲ್ಲಿ ನಡೆಯುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ಪಿ.ಎನ್. ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಮಲಾ ಭರತ್, ಬಜತ್ತೂರು ಕ್ಲಸ್ಟರ್ ಸಿ.ಆರ್.ಪಿ ಮಂಜುನಾಥ್ ಕೆ.ವಿ, ಉಪ್ಪಿನಂಗಡಿ ಹೋಬಳಿ ಕಸಾಪ ನಿಯೋಜಿತ ಅಧ್ಯಕ್ಷ ಕರುಣಾಕರ ಸುವರ್ಣ, ಕೋಶಾಧ್ಯಕ್ಷ ಡಾ. ಹರ್ಷ ಕುಮಾರ್ ರೈ, ಹಿರಿಯ ಪತ್ರಕರ್ತ ಉದಯ ಕುಮಾರ್ ಯು.ಎಲ್. ಭಾಗವಹಿಸಲಿದ್ದಾರೆ. ಕಸಾಪ ತಾಲೂಕು ಅಧ್ಯಕ್ಷ ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.
ಹಿರಿಯ ಸಾಹಿತಿ ವಿಲ್ಫ್ರೆಡ್ ಡಿಸೋಜ, ಶಿಕ್ಷಕ ಕೃಷ್ಣ ಕಾರಂತ್, ಪತ್ರಕರ್ತರಾದ ಹರೀಶ್ ಬಾರಿಂಜ, ಮೇಘ ಪಾಲೆತ್ತಾಡಿ, ಶೋಬಾನೆ ಹಾಡುಗಾರ್ತಿ ಪ್ರೇಮ ಬಾರಿಕೆ ಹಾಗೂ ಕನ್ನಡ ಶಾಲೆಯ ಉಳಿವಿಗಾಗಿ ಶ್ರಮಿಸಿದ ಕಾಂಚನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಲಕ್ಷ್ಮೀನಾರಾಯಣ ಅವರನ್ನು ಯುವ ಉದ್ಯಮಿ ರಾಧಾಕೃಷ್ಣ ಕುವೆಚ್ಚಾರು ಸನ್ಮಾನಿಸಲಿದ್ದಾರೆ. ಬಜತ್ತೂರು ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕವಿ ಗೋಷ್ಠಿ, ಕಥಾ ಗೋಷ್ಠಿ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.