ಪುತ್ತೂರು: ಪುತ್ತೂರಿನ ತಾಲೂಕು ಕ್ರೀಡಾಂಗಣದಲ್ಲಿ ಡಿ.1, 2, 3 ಹಾಗೂ 4ರಂದು ನಡೆಯುವ ರಾಜ್ಯಮಟ್ಟದ 17ರ ವಯೋಮಾನದ ಪ್ರೌಢಾಶಾಲಾ ವಿಭಾಗದ ಬಾಲಕ-ಬಾಲಕಿಯರ ಕ್ರೀಡಾಕೂಟ ಪುತ್ತೂರಿಗೆ ಮೆರುಗು ತರಲಿದ್ದು, ಈ ನಿಟ್ಟಿನಲ್ಲಿ ವ್ಯವಸ್ಥೆಗಳು ಸಮರೋಪಾದಿಯಲ್ಲಿ ಸಜ್ಜುಗೊಳ್ಳುತ್ತಿವೆ ಎಂದು ಕ್ರೀಡಾಕೂಟ ಸಂಚಾಲಕ, ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ತಿಳಿಸಿದರು.
ಅವರು ಶುಕ್ರವಾರ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಕ್ರೀಡಾಕೂಟದ ಯಶಸ್ಸಿಗಾಗಿ ಸುಮಾರು 18 ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ನಾಲ್ಕು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಎರಡು ದಿನ ಕ್ರೀಡಾ ಕೂಟದ ಉದ್ಘಾಟನೆ ನಡೆಯಲಿದೆ. ಉಳಿದ ಎರಡು ದಿನಗಳಲ್ಲಿ ಕ್ರೀಡಾಕೂಟ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ವಿಶೇಷವಾಗಿ ಡಿ. 1ರಂದು ಬೆಳಿಗ್ಗೆ ಕ್ರೀಡಾಕೂಟದ ಅಂಗವಾಗಿ ಕ್ರೀಡಾಜ್ಯೋತಿಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗಿ ಅಲ್ಲಿಂದ ಪುತ್ತೂರು ತಾಲೂಕಿನಾದ್ಯಂತ ಕ್ರೀಡಾ ರಥದೊಂದಿಗೆ ಕ್ರೀಡಾ ಜ್ಯೋತಿ ಸಂಚರಿಸಲಿದೆ. ಡಿ. 2ರಂದು ಸಂಜೆ ಕ್ರೀಡಾಜ್ಯೋತಿ ಹಾಗೂ ರಥ ದರ್ಬೆಗೆ ಆಗಮಿಸಿ ಅಲ್ಲಿಂದ ಭವ್ಯ ಮೆರವಣಿಗೆಯೊಂದಿಗೆ ಕ್ರೀಡಾಂಗಣಕ್ಕೆ ತರಲಾಗುವುದು. ಬಳಿಕ 35 ಜಿಲ್ಲೆಗಳಿಂದ ಆಗಮಿಸುವ ಸುಮಾರು ಎರಡೂವರೆ ಸಾವಿರ ಕ್ರೀಡಾಪಟುಗಳಿಂದ ತಮ್ಮ ತಮ್ಮ ಧ್ವಜದೊಂದಿಗೆ, 15 ಬ್ಯಾಂಡ್ ಸೆಂಟ್ ನೊಂದಿಗೆ ಆಕರ್ಷಕ ಪಥ ಸಂಚಲನ ನಡೆಯಲಿದೆ. ಡಿ. 3ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಕ್ರೀಡಾಕೂಟ ನಡೆಯಲಿದೆ ಎಂದು ತಿಳಿಸಿದರು.
ಮುಖ್ಯವಾಗಿ ವಿವಿಧ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಯಾವುದೇ ವ್ಯವಸ್ಥೆಯಲ್ಲಿ ತೊಂದರೆ ಆಗದ ರೀತಿ ಎಲ್ಲಾ ಇಲಾಖೆಗಳ ಸಹಕಾರ ಕೋರಲಾಗಿದೆ. ಮುಖ್ಯವಾಗಿ ಕ್ರೀಡಾಪಟುಗಳಿಗೆ ನೀಡುವ ಆಹಾರ, ವಸತಿ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು. ಒಟ್ಟಾರೆಯಾಗಿ ಪುತ್ತೂರಿನಲ್ಲಿ ನಡೆಯುವ ಈ ಕ್ರೀಡಾಕೂಟದ ಯಶಸ್ಸಿಗಾಗಿ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಡೆಸುವಂತೆ ಈಗಾಗಲೇ ವಿವಿಧ ಇಲಾಖೆ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರೊಂದಿಗೆ ಚರ್ಚಿಸಲಾಗಿದೆ. ಒಟ್ಟಾರೆಯಾಗಿ ಕ್ರೀಡಾಕೂಟಕ್ಕೆ ಸುಮಾರು 56 ಲಕ್ಷ ರೂ. ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಊಟೋಪಚಾರಕ್ಕೆ ಹಸಿರುವಾಣಿ ನೀಡುವಂತೆ ಕೋರಲಾಗಿದ್ದು, ಈ ಕುರಿತು ಹಸಿರುವಾಣಿ ನೀಡುವವರಿಗಾಗಿ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ, ಸುಮಾರು 32 ಜಿಲ್ಲೆಗಳಿಂದ, ಪ್ರತಿ ಜಿಲ್ಲೆಗಳಿಂದ 70 ಕ್ರೀಡಾಪಟುಗಳಂತೆ 2500 ಕ್ರೀಡಾಪಟುಗಳು ಆಗಮಿಸಲಿದ್ದು, ಎರಡು ಸೈನಿಕ ಶಾಲಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈಗಾಗಲೇ ಕ್ರೀಡಾಪಟುಗಳಿಗೆ ಉಳಕೊಳ್ಳುವ ನಿಟ್ಟಿನಲ್ಲಿ ಕೆಲವು ಶಾಲೆಗಳನ್ನು ನಿಗದಿ ಮಾಡಲಾಗಿದ್ದು, ವಸತಿ ಹಾಗೂ ಶೌಚಾಲಯಗಳ ಶುಚಿತ್ವಕ್ಕೆ ಗಮನ ನೀಡಲಾಗುವುದು. ಹಾಗೆಯೇ ವಿವಿಧ ಶಾಲೆಗಳಿಂದ ಕ್ರೀಡಾಪಟುಗಳನ್ನು ಕರೆತರಲು ಶಾಲಾ ಬಸ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆಯ ಸಹಕಾರಗಳನ್ನು ಕೋರಲಾಗಿದೆ ಎಂದು ತಿಳಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿ, ಕ್ರೀಡಾಕೂಟದ ಯಶಸ್ಸಿಗಾಗಿ 15ರಿಂದ 18 ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗೆ ಮುಖ್ಯಸ್ಥರು, ಸದಸ್ಯರನ್ನು ನೇಮಕ ಮಾಡಲಾಗಿದೆ. ಕ್ರೀಡಾಕೂಟದ ನಿರ್ವಹಣೆ ಕುರಿತು ಸದ್ಯದಲ್ಲೇ ಮಾಹಿತಿ ಕಾರ್ಯಾಗಾರ ನಡೆಸಲಾಗುವುದು. ಕ್ರೀಡಾಕೂಟದಲ್ಲಿ ನಿರ್ಣಾಯಕರಾಗಿ ಸುಮಾರು 250 ಮಂದಿ ಇರುತ್ತಾರೆ. ಸುಮಾರು 26 ಶಾಲಾ ವಾಹನಗಳು, ಎರಡು ಬಸ್ ರಿಸರ್ವೇಶನ್ ನಲ್ಲಿ ಇರುತ್ತವೆ. ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್, ಸಮಗ್ರ ಚಾಂಪಿಯನ್, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳಿದ್ದು, ಪದಕ, ಸರ್ಟಿಫಿಕೇಟ್ ನೀಡಲಾಗುವುದು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ ಎಂದ ಅವರು, ಫೋಟೊ ಫಿನಿಶ್ ಅಂಪೈಯರ್ ವ್ಯವಸ್ಥೆ ಮಾಡಲಾಗುವುದು ಎಂದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ಕೋರ್ಮಂಡ ಮಾತನಾಡಿ, ಮಣ್ಣಿನ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಯಶಸ್ವಿಯಾಗುವ ವಿಶ್ವಾಸವಿದೆ. ಕ್ರೀಡಾಕೂಟಕ್ಕೆ ನುರಿತ ದೈಹಿಕ ಶಿಕ್ಷಣ ಶಿಕ್ಷಕರು ಆಗಮಿಸಲಿದ್ದಾರೆ. ಕ್ರೀಡಾಕೂಟದಲ್ಲಿ ದೈಹಿಕ್ಷ ಶಿಕ್ಷಣ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮವೂ ಇದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಶಾಲಾ ಶಿಕ್ಷಣ ಉಪನಿರ್ದೇಶಕರ ಕಚೇರಿ ಮಂಗಳೂರು, ಪುತ್ತೂರು ಉಪವಿಭಾಗ ಅಧಿಕಾರಿಗಳು, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ಸಹಯೋಗದೊಂದಿಗೆ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆ ನೇತೃತ್ವದಲ್ಲಿ ಕ್ರೀಡಾಕೂಟ ನಡೆಯಲಿದೆ.
ಶ್ರೀ ರಾಮಕೃಷ್ಣ ಪ್ರೌಢಶಾಲಾ ಮುಖ್ಯಶಿಕ್ಷಕಿ ಜಯಲಕ್ಷ್ಮೀ ಸ್ವಾಗತಿಸಿದರು. ಸಭೆಯಲ್ಲಿ ರವಿಪ್ರಸಾದ್ ಶೆಟ್ಟಿ, ಅಶ್ವತ್, ತನುಜಾ ಉಪಸ್ಥಿತರಿದ್ದರು.