ಪುತ್ತೂರು: ಹಲವು ವರ್ಷಗಳ ಬೇಡಿಕೆಯಾದ ನೆಹರುನಗರ – ಹಾರಾಡಿ ಸಂಪರ್ಕ ರಸ್ತೆಯ ವಿವೇಕಾನಂದ ಕಾಲೇಜು ಬಳಿ ಇರುವ ರೈಲ್ವೇ ಮೇಲ್ಸೇತುವೆ ಅಗಲೀಕರಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತು.
ಅರ್ಚಕರು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಪೂಜಾ ವಿಧಿವಿಧಾನ ನೆರವೇರಿಸಿದರು. ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಪುತ್ತೂರಿನಲ್ಲಿ ಮೂರು ಅಂಡರ್ ಪಾಸ್ ಅಭಿವೃದ್ಧಿಯ ಬೇಡಿಕೆಯಿತ್ತು. ಮುರ, ಎಪಿಎಂಸಿ ಹಾಗೂ ವಿವೇಕಾನಂದ ಮೇಲ್ಸೇತುವೆ. ಈ ಪೈಕಿ ಮುರ ಹಾಗೂ ಎಪಿಎಂಸಿ ರೈಲ್ವೇ ಕಾಮಗಾರಿ ಪೂರ್ಣಗೊಂಡಿದ್ದು, ಜನರ ಉಪಯೋಗಕ್ಕೆ ತೆರೆದುಕೊಂಡಿದೆ. ಇದೀಗ ವಿವೇಕಾನಂದ ರೈಲ್ವೇ ಮೇಲ್ಸೇತುವೆ ಅಗಲೀಕರಣದ ಬೇಡಿಕೆಯನ್ನು ಕಾಲೇಜಿನವರು ಬಹಳ ಹಿಂದಿನಿಂದಲೂ ಇಟ್ಟಿದ್ದಾರೆ. ಇದು ಆರ್.ಟಿ.ಓ. ಕಚೇರಿ, ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕಿಸುತ್ತದೆ. 5.35 ಕೋಟಿ ರೂ. ವೆಚ್ಚದ ಕಾಮಗಾರಿ ಮುಂದಿನ ಮೂರುವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಹಾಗೂ ರೈಲ್ವೇ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಈಗಾಗಲೇ ಹಾರಾಡಿ ರೈಲ್ವೇ ರಸ್ತೆಯೂ ಸಂಪೂರ್ಣಗೊಂಡಿದೆ. ಸುಬ್ರಹ್ಮಣ್ಯ ರೈಲ್ವೇ ಕಾಮಗಾರಿ ಅಪ್ ಗ್ರೇಡ್ ಆಗಿದೆ. ಇವೆಲ್ಲಾ ಸಂಪೂರ್ಣಗೊಂಡರೆ ವಂದೇ ಮಾತರಂ ರೈಲಿನ ವ್ಯವಸ್ಥೆ ಆಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಹಿರಿಯ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಚನಿಲ ತಿಮ್ಮಪ್ಪ ಶೆಟ್ಟಿ, ಆರ್.ಸಿ. ನಾರಾಯಣ್, ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಸಾಜ ರಾಧಾಕೃಷ್ಣ ಆಳ್ವ ಸೇರಿದಂತೆ ವಿವೇಕಾನಂದ ಕಾಲೇಜು ಆಡಳಿತ ಮಂಡಳಿಯವರು, ಸಾರ್ವಜನಿಕರು ಉಪಸ್ಥಿತರಿದ್ದರು.