ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ಮಾಜಿ ಶಾಸಕ ಡಾ.ಯತೀಂದ್ರ ಅವರು ಮೊಬೈಲ್’ನಲ್ಲಿ ಮಾತನಾಡಿರುವ ವೀಡಿಯೋ ಒಂದು ಇದೀಗ ಮಾಧ‍್ಯಮಗಳಲ್ಲಿ ವೈರಲ್ ಆಗಿದೆ.
ಸಾರ್ವಜನಿಕ ಸಭೆಯಲ್ಲಿದ್ದ ಯತೀಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತನಾಡುತ್ತಾ, “ಅಪ್ಪ ಹೇಳಿ” ಎಂದು ಮಾತು ಆರಂಭಿಸಿ ತಾನು ನೀಡಿದ ಲಿಸ್ಟ್ ಬಗ್ಗೆ ಮಾತನಾಡಿದ್ದಾರೆ. ಆ ಕಡೆಯಿಂದ ವಿವೇಕಾನಂದರ ಹೆಸರು ಎತ್ತಿದ್ದು, ಇದಕ್ಕೆ ಯಾರು ಎಂದು ಯತೀಂದ್ರ ಪ್ರಶ್ನೆ ಮಾಡುತ್ತಾರೆ.
ಅಲ್ಲದೆ, ಬೇರೊಂದು ಲಿಸ್ಟ್ ನೀಡಿದ ಬಗ್ಗೆ ಅಸಮಾಧಾನಗೊಂಡ ಯತೀಂದ್ರ ಅವರು, “ನಾನು ಕೊಟ್ಟಿರುವುದೇ ಐದು” ಅಂತ ಹೇಳಿ ಮಹದೇವರಿಗೆ ಫೋನ್ ನೀಡುವಂತೆ ಸೂಚಿಸುತ್ತಾರೆ. ಬಳಿಕ ಮಹದೇವ್ ಜೊತೆ ಮಾತನಾಡಿದ ಯತೀಂದ್ರ, “ಮಹದೇವ್ ಯಾಕೆ ಯಾವ್ದ್ಯಾವುದು ಕೊಡ್ತಾ ಇದ್ದೀರಿ? ಮತ್ತೆ ಇದೆಲ್ಲ ಯಾರು ಕೊಡ್ತಿರೋದು” ಅಂತ ಪ್ರಶ್ನೆ ಮಾಡಿದ್ದಾರೆ.
“ಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟೇ ಮಾತ್ರ ಮಾಡಿ” ಅಂತ ಮಹದೇವ್ ಅವರಿಗೆ ಸೂಚಿಸಿ ಸಹಾಯಕರಿಗೆ ಫೋನ್ ನೀಡುತ್ತಾರೆ.
ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆ ನಡೆಸುತ್ತಿದ್ದರು. ಆಶ್ರಯ ಸಮಿತಿ ಅಧ್ಯಕ್ಷರಾಗಿರುವ (ಸಾಂವಿಧಾನಿಕ ಹುದ್ದೆ) ಯತೀಂದ್ರ ಅವರು ಜನ ಸಂಪರ್ಕ ಸಭೆಯಲ್ಲಿ ಎಲ್ಲರ ಮನವಿ ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಸೂಚಿಸಲು ಯತ್ನಿಸುತ್ತಿದ್ದಾಗ, ಈ ಸಂಭಾಷಣೆ ನಡೆದಿದೆ ಎಂದು ಹೇಳಲಾಗಿದೆ.
ಈ ವೀಡಿಯೋವನ್ನು ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮಾಧ್ಯಮಗಳಲ್ಲಿ ವರದಿಯಾಗಿದೆ. ಸರ್ಕಾರದ ಆಡಳಿತದಲ್ಲಿ ಯತೀಂದ್ರ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ತಂದೆ ಸಿದ್ದರಾಮಯ್ಯನವರ ಬೆನ್ನ ಹಿಂದೆ ಆಡಳಿತ ಮಾಡುತ್ತಿರುವವರು ಪುತ್ರ ಯತೀಂದ್ರ, ರಾಜ್ಯದಲ್ಲಿ ವೈಎಸ್ಟಿ ಕಲೆಕ್ಟ್ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಈ ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಆರೋಪಿಸಿದ್ದರು. ಇಂತಹ ಆರೋಪದ ಬೆನ್ನಲ್ಲೇ ಡಾ. ಯತೀಂದ್ರ ಅವರು ಮೊಬೈಲಿನಲ್ಲಿ ಮಾತನಾಡಿರುವ ವಿಡಿಯೊ ಮಾಧ್ಯಮ ಪ್ರತಿನಿಧಿಗಳ ಕ್ಯಾಮರಾಕ್ಕೆ ಸೆರೆಸಿಕ್ಕಿದ್ದು ಅದು ವಿವಾದವಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.