ಪುತ್ತೂರು: ಸಂಪತ್ತಿನ ಮೌಲ್ಯವರ್ಧನೆ ಹಾಗೂ ಮಾನವೀಯತೆ ಇವೆರಡೂ ಸೇವಾ ಸೌರಭ ಕಾರ್ಯಕ್ರಮದಲ್ಲಿ ಮೇಳೈಸಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ರೈ ಎಸ್ಟೇಟ್ ಎಜ್ಯುಕೇಶಬಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಸ್ತ್ರ ವಿತರಣೆ, ಸಹಭೋಜನ ಕಾರ್ಯಕ್ರಮ ‘ಸೇವಾ ಸೌರಭ’ವನ್ನು ಕಲ್ಪವೃಕ್ಷದ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂಪತ್ತು ಮೌಲ್ಯವರ್ಧನೆ ಆಗುವುದು ದಾನ ಮಾಡಿದಾಗ ಮಾತ್ರ. ಇದರೊಂದಿಗೆ ಮಾನವೀಯತೆ ಅಗತ್ಯ. ಮಾನವೀಯತೆ ಇದ್ದಲ್ಲಿ ಬದುಕು ಬಂಗಾರವಾಗಲು ಸಾಧ್ಯ. ಇವೆರಡನ್ನು ಹೊಂದಿರುವ ಸೇವಾ ಸೌರಭದಲ್ಲಿ ಅತಿಥಿ ದೇವೋಭವ ಅರ್ಥ ಸಂಪನ್ನಗೊಂಡಿದೆ. ಈ ನಿಟ್ಟಿನಲ್ಲಿ ಲೋಕದ ಜನರನ್ನು ಪ್ರೀತಿಯಿಂದ ಸೆಳೆದು, ಅವರಲ್ಲಿ ಪ್ರೀತಿಯನ್ನು ತುಂಬಿಸುವ ಕೆಲಸ ಆಗಬೇಕಾಗಿದೆ. ಆ ಕೆಲಸವನ್ನು ಟ್ರಸ್ಟ್ ರೂವಾರಿ ಅಶೋಕ್ ರೈ ಅವರು ಮಾಡುತ್ತಿದ್ದಾರೆ ಎಂದು ನುಡಿದರು.
ವಿಧಾನಸಭೆ ಸಭಾಪತಿ ಯು.ಟಿ. ಖಾದರ್ ಮಾತನಾಡಿ, ಸೇವಾ ಸೌರಭ ಐತಿಹಾಸಿಕ ಕಾರ್ಯಕ್ರಮ. ಮಾತ್ರವಲ್ಲ, ಪುತ್ತೂರಿನ ಸಂಸ್ಕೃತಿಯ ಸಾರವನ್ನು ಎತ್ತಿಹಿಡಿದಿದೆ. ಜತೆಗೆ ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಬಡ 20 ಮಂದಿಯನ್ನು ಸನ್ಮಾನಿಸಲಾಗಿದೆ ಎಂದ ಅವರು, ಕಂಬಳ ಕ್ರೀಡಾಕೂಟವನ್ನು ಬೆಂಗಳೂರಿನಲ್ಲಿ ಆಯೋಜಿಸಿ ಮತ್ತೊಮ್ಮೆ ಪುತ್ತೂರಿನ ಜನತೆಗೆ ಗೌರವ ತಂದು ಕೊಡುವ ಕೆಲಸ ಅಶೋಕ್ ರೈ ಅವರಿಂದ ಆಗಲಿದೆ. ಮುಂದೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಿ ಎಂದು ವಿನಂತಿಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ದೇವರು ಮೆಚ್ಚುವ ಕೆಲಸವನ್ನು ಅಶೋಕ್ ರೈಗಳು ಮಾಡುತ್ತಿದ್ದಾರೆ. ಶಾಸಕರಾಗಲು ದೇವರು ಅವರ ಜತೆ ನಿಂತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ದಾನ-ಧರ್ಮ ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ. ಇಲ್ಲಿ ಅಶೋಕ್ ರೈಯವರ ಮಾಡಿರುವುದು ದಾನದ ಪಾವಿತ್ರ್ಯತೆಯನ್ನು ಉಳಿಸುವ ಕೆಲಸ ಎಂದರು.
ಅಧ್ಯಕ್ಷತೆ ವಹಿಸಿದ್ದ ರೈ ಏಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ಮಾತನಾಡಿ, ನಮ್ಮ ತಂದೆ-ತಾಯಿ ಮಾಡಿಕೊಂಡು ಬಂದಿರುವ ವಸ್ತ್ರ ವಿತರಣೆಯ ಸಂಪ್ರದಾಯವನ್ನು ನಾನು ಮುಂದುವರಿಸಿಕೊಂಡು ಬರುತ್ತಿದ್ದೇನೆ. ಮುಂದಿನ ದಿನಗಳಲ್ಲಿ 94ಸಿ, 94ಸಿಸಿ ಕಾನೂನು ರೀತಿಯಲ್ಲಿ, ಭ್ರಷ್ಟಾಚಾರ ಮುಕ್ತವಾಗಿ ಪ್ರತಿಯೊಬ್ಬ ಫಲಾನುಭವಿಯ ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ. ಈಗಾಗಲೇ 600 ಮಂದಿ ಮಹಿಳೆಯರು ಮನೆಯಿಲ್ಲದೆ ನಿರ್ಗತಿಕರಾಗಿ ಬದುಕುತ್ತಿದ್ದಾರೆ. ಅವರಿಗೆ ಮೂರು ಸೆಂಟ್ಸ್ ಜಾಗ ನೀಡುವ ಕೆಲಸ ಮುಂದಿನ ದಿನಗಳಲ್ಲಿ ಆಗಲಿದೆ ಎಂದರು.
ಪುತ್ತೂರು ಮಾಯಿದೇ ದೇವುಸ್ಚರ್ಚ್ ಧರ್ಮಗುರು ಅತಿ ವಂದನೀಯ ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಅಶೋಕ್ ರೈಗಳು ಬಡವರಲ್ಲಿ ದೇವರನ್ನು ಕಾಣುವ ಮೂಲಕ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಟ್ರಸ್ಟ್ ಮುಖ್ಯಸ್ಥೆ ಸುಮಾ ಅಶೋಕ್ ರೈ, ರ್ಮಿಕ ಮುಖಂಡ ಹುಸೈನ್ ದಾರಿಮಿ ರೆಂಜಿಲಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೈ ಎಂ.ಬಿ., ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ., ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಟ್ರಸ್ಟ್ ನ ನಿಹಾಲ್ ರೈ, ಸುಬ್ರಹ್ಮಣ್ಯ ರೈ ದಂಪತಿ, ಡಾ.ರಘು ಬೆಳ್ಳಿಪ್ಪಾಡಿ, ಬೇಬಿ ಕುಂದರ್, ಪ್ರಗತಿಪರ ಕೃಷಿಕ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ಜಿಪಂ ಮಾಜಿ ಸದಸ್ಯ ಎಂ.ಎಸ್. ಮಹಮ್ಮದ್, ಟ್ರಸ್ಟ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ಕೃಷ್ಣ ಪ್ರಸಾದ್ ಬೊಲ್ಲಾವು ಉಪಸ್ಥಿತರಿದ್ದರು. ಸಮಾರಂಭದಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು ಅವರನ್ನು ಸನ್ಮಾನಿಸಲಾಯಿತು.
ರೈ,ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿದರು. ಕೆಪಿಸಿಸಿ ವಕ್ತಾರ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮ ನಡೆಸುವ ಸಲುವಾಗಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಪೆಂಡಾಲ್‍ನ್ನು ಹಾಕಲಾಗಿತ್ತು. 8 ರಿಂದ 10 ಸಾವಿರ ಮಂದಿ ಕುಳಿತುಕೊಳ್ಳುವ ಸಭಾಂಗಣವನ್ನು ನಿರ್ಮಿಸಲಾಗಿದ್ದು, ಬೆಳಿಗ್ಗೆಯಿಂದ ಜನ ಸಾಗರೋಪಾದಿಯಲ್ಲಿ ಹರಿದು ಬಂದು ಇಡೀ ಸಭಾಂಗಣ ತುಂಬಿ ತುಳುಕಿತ್ತು.
ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ಆಗಮಿಸಿದ ಮಹಿಳೆಯರು ಸೀರೆ ಹಾಗೂ ಪುರುಷರು ಬೆಡ್ ಶೀಟ್, ಲುಂಗಿ ಪಡೆದುಕೊಂಡರು. ವಸ್ತ್ರ ಪಡೆದುಕೊಂಡವರ ಕೈ ಬೆರಳಿಗೆ ಚುನಾವಣೆಗೆ ಬಳಸುವ ಶಾಯಿಯನ್ನು ಹಾಕಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಗೂಡುದೀಪ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡವರು ತಮ್ಮ ಮನೆಯಲ್ಲೇ ಗೂಡುದೀಪ ರಚಿಸಿ ತಂದಿದ್ದರು. ಅದನ್ನು ಸಭಾಂಗಣದ ಮಧ್ಯಬಾಗದಲ್ಲಿ ನೇತು ಹಾಕಲಾಗಿತ್ತು. ಸುಮಾರು 100 ಕ್ಕೂ ಅಧಿಕ ಗೂಡುದೀಪಗಳು ಸಭೆಯ ಗಮನವನ್ನು ಸೆಳೆಯುತ್ತಿದ್ದವು.
ಭೋಜನ ವ್ಯವಸ್ಥೆ:
ಸಹಭೋಜನಕ್ಕಾಗಿ ಅಲ್ಲಲ್ಲಿ ಒಟ್ಟು 15 ಕೌಂಟರ್‍ಗಳನ್ನು ತೆರೆಯಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದವರು ಸಾವಕಾಶವಾಗಿ ಸರತಿ ಸಾಲಿನಲ್ಲಿ ಬಂದು ಭೋಜನ ಸ್ವೀಕರಿಸಿದರು. ಅತಿಥಿ ಗಣ್ಯರಿಗೆ ಪ್ರತ್ಯೇಕ ಭೋಜನ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಉಪ್ಪಿನಕಾಯಿ, ಕುಚ್ಚಿಲು ಅನ್ನ, ಬಟಾಣಿ-ಬಟಾಟೆ ಗಸಿ, ನುಗ್ಗೆ ಬದನೆ ಸಾಂಬಾರು, ಸಾರು, ಕಡ್ಲೆಬೇಳೆ ಪಾಯಸವನ್ನೊಳಗೊಂಡ ಭೋಜನ ಸ್ವೀಕರಿಸಿದರು.
ಬಡ ಶ್ರಮಜೀವಿ ಸಾಧಕ 20 ಮಂದಿಗೆ ಸನ್ಮಾನ :
ಸಮಾರಂಭದಲ್ಲಿ ಬಡ ಶ್ರಮಜೀವಿ ಸಾಧಕರು, ಸ್ವಾಭಿಮಾನಿ ಬದುಕು ಕಟ್ಟಿಕೊಂಡ ಪದ್ಮಾವತಿ ಕಜೆ, ಪ್ರೇಮಾ ಕಕ್ವೆಮನೆ, ಅಬ್ದುಲ್ ರಹಿಮಾನ್ ಹಾಜಿ, ಚಂದ್ರಾವತಿ ಅಡ್ವಾಯಿಮೂಲೆ, ವೆಂಕಪ್ಪ ಪೂಜಾರಿ ಕರ್ಮಿನಡ್ಕ, ಬಾಲಕೃಷ್ಣ ಪೂಜಾರಿ, ಸೆವುಲಿನ್ ಡಿ’ಸೋಜಾ ಪಟ್ಟೆ, ವಸಂತ ಕುಮಾರ್ ನೆಕ್ಕರೆ, ಬಾಲಕೃಷ್ಣ ರಾಮನಗರ, ಖತೀಜಮ್ಮ, ಲಕ್ಷ್ಮೀ ಬಂಗಾರಡ್ಕ, ಜಾನಕಿ ದಂಡೆಪಾಡಿ, ಮಹಮ್ಮದ್ ಅಶ್ರಫ್, ಲೀಲಾವತಿ, ಬೇಬಿ ಕಾರ್ಜಾಲು, ಜಯರಾಮ ಶೆಟ್ಟಿ ದೇರ್ಲ, ಅಬ್ದುಲ್ ಗಫೂರ್, ಚೆನ್ನಯ್ಯ ಆಚಾರ್ಯ, ದೇವಪ್ಪ ನಲಿಕೆ ಅವರನ್ನು ಸನ್ಮಾನಿಸಲಾಯಿತು.