ಪುತ್ತೂರು: ಜಿಲ್ಲೆಯ ಅಡಿಕೆ ಬೆಳೆಯುವ ರೈತರನ್ನು ಕಾಡುತ್ತಿರುವ ಎಲೆ ಚುಕ್ಕಿ ರೋಗ, ಹಳದಿ ರೋಗ ನಿವಾರಣೆಗೆ ಸರಿಯಾದ ಸಂಶೋಧನಾ ಕ್ರಮ ಹಾಗೂ ಪರಿಹಾರ, ಅಡಿಕೆ ಬೆಳೆಯುವ ರೈತನಿಗೆ ಸಿಗಬೇಕಾದ ಬೆಳೆ ವಿಮೆ ಕುರಿತು ಸರ್ಕಾರ ಒಂದು ತಿಂಗಳ ಒಳಗಾಗಿ ಸಮರ್ಪಕವಾದ ಮಾಹಿತಿಯನ್ನು ನೀಡದೇ ಹೋದರೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ರೈತರನ್ನು ಸೇರಿಸಿಕೊಂಡು ಆಮ್ ಆದ್ಮಿ ಪಕ್ಷ ಹೋರಾಟ ನಡೆಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಾ. ವಿಶು ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಡಿಕೆ ರೈತರಿಗೆ ಎಲೆಚುಕ್ಕಿ ರೋಗ ಹಾಗೂ ಹಳದಿ ರೋಗಗಳು ಸಂಕಷ್ಟ ತಂದಿವೆ. ಈ ಬಗ್ಗೆ ಸರಿಯಾದ ಸಂಶೋಧನೆ ನಡೆಯುತ್ತಿಲ್ಲ. ವಿಜ್ಞಾನಿಗಳು ಸಮರ್ಪಕ ರೀತಿಯಲ್ಲಿ ಸಂಶೋಧನೆ ಮಾಡುತ್ತಿಲ್ಲ. ಇದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ರೈತರು ವಿಫಲರಾಗುತ್ತಿದ್ದಾರೆ. ಈ ರೋಗಗಳ ಸಮಸ್ಯೆಯಿಂದ ಅಡಿಕೆ ಇಳುವರಿಯಲ್ಲಿ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದೆ. ಸರ್ಕಾರ ಹಾಗೂ ಅಧಿಕಾರಿ ವರ್ಗ ಯಾವುದೇ ಸ್ಪಂಧನೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಎಲೆಚುಕ್ಕಿ ರೋಗ ಮತ್ತು ಹಳದಿ ರೋಗದ ಕುರಿತು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಪರಿಹಾರದ ಭರವಸೆ ನೀಡಿದ್ದಾರೆ. ಆದರೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಈಗಾಗಲೇ ದ.ಕ. ಜಿಲ್ಲೆಯಲ್ಲಿ ಹಲವಾರು ತೋಟಗಳಲ್ಲಿ ಈ ರೋಗಗಳ ಹಾವಳಿಯಿಂದ ಸಮಸ್ಯೆ ಉಂಟಾಗಿದೆ. ಅಡಿಕೆ ಮರಗಳು ಸಾಯುತ್ತಿವೆ. ರೈತರ ಬದುಕಿಗೆ ಭದ್ರತೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ರೋಗಗಳ ಕುರಿತು ಸಮರ್ಪಕವಾದ ಸಂಶೋಧನೆ ನಡೆಯಬೇಕು. ರೋಗ ತಡೆಗೆ ಶಾಶ್ವತವಾದ ಪರಿಹಾರ ಕಂಡು ಹಿಡಿಯಬೇಕು. ಬೆಳೆ ನಷ್ಟವಾದ ರೈತರಿಗೆ ಆರ್ಥಿಕ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಹಿಂದಿನ ಸರ್ಕಾರ ಎಕರೆಗೆ 30 ಸಾವಿರ ರೂ. ಪರಿಹಾರ ಘೋಷಣೆ ಮಾಡಿತ್ತು. ಆದರೆ ಈ ಪರಿಹಾರ ಕೇವಲ ಘೋಷಣೆಯಲ್ಲಿಯೇ ಬಾಕಿಯಾಗಿದೆ. ಯಾವ ರೈತನಿಗೂ ಈ ಹಣ ದೊರೆತಿಲ್ಲ. ಪ್ರಸ್ತುತ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು. ಇಲ್ಲದಿದ್ದರೆ ದೇಶದ ಬೆನ್ನೆಲುಬಾದ ರೈತ ನಾಶವಾಗುವ ಸ್ಥಿತಿ ಉಂಟಾಗಲಿದೆ. ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ನೇತೃತ್ವದಲ್ಲಿ ಪ್ರತೀ ಗ್ರಾಪಂ ಮಟ್ಟದಲ್ಲಿ ರೋಗ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಬೇಕು. ಶಾಸಕರು ಮುಖ್ಯಮಂತ್ರಿ ಜತೆ ಮಾತನಾಡಿ ರೈತರ ಸಮಸ್ಯೆ ಕುರಿತು ಮಾತನಾಡಬೇಕು ಎಂದು ಅವರು ಒತ್ತಾಯಿಸಿದರು.
ಕೃಷಿ ತೋಟಗಾರಿಕಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಿ ತಾಲೂಕಿಗೆ ಕನಿಷ್ಠ 5 ಮಂದಿ ಫೀಲ್ಡ್ ಅಧಿಕಾರಿಗಳ ನೇಮಕ ಮಾಡಬೇಕು. ಈ ಅಧಿಕಾರಿಗಳು ಪ್ರತೀ ಗ್ರಾಮದಲ್ಲಿ ತಿಂಗಳಿಗೊಮ್ಮೆ ಮಾಹಿತಿ- ಅರಿವು ಕಾರ್ಯಕ್ರಮ ನಡೆಸಬೇಕು ಎಂದು ಅವರು ಹೇಳಿದರು.
ರೈತರು ತಮ್ಮ ಬೆಳೆಗಳ ಬಗ್ಗೆ ಬೆಳೆ ವಿಮಾ ಕಂತು ಪಾವತಿ ಮಾಡಿದ್ದು, ನವೆಂಬರ್ ತಿಂಗಳಾದರೂ ಬೆಳೆ ವಿಮೆ ರೈತರಿಗೆ ಬಂದಿಲ್ಲ. ಕೆಲ ಭಾಗದಲ್ಲಿ ರೈತರಿಂದ ಕಂತು ಪಾವತಿಯಲ್ಲಿ ತಾರತಮ್ಯ ಮಾಡಿರುವ ಮಾಹಿತಿಯೂ ಇದೆ. ಬೆಳೆ ವಿಮೆಯ ಕುರಿತು ಶಾಸಕರು ಇಲಾಖೆಯ ಜತೆಗೆ ಮಾತನಾಡಿ, ರೈತರಿಗೆ ಆರ್ಥಿಕ ಭದ್ರತೆ ಒದಗಿಸುವಂತೆ ಮಾಡಬೇಕು. ಅಲ್ಲದೇ, ತಕ್ಷಣ ರೈತರಿಗೆ ಬೆಳೆ ವಿಮೆ ಪಾವತಿಯಾಗುವಂತೆ ಮಾಡಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಉದಯ ಶಂಕರ್, ಸಂಘಟನಾ ಕಾರ್ಯದರ್ಶಿ ಜನಾರ್ಧನ ಬಂಗೇರ ಮತ್ತು ಮಾಜಿ ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ ಕೋಲ್ಪೆ ಉಪಸ್ಥಿತರಿದ್ದರು.