ಪುತ್ತೂರು: ರಾಜ್ಯದಲ್ಲಿ ಎಂದೂ ಕಂಡು ಕೇಳರಿಯದ ಬರಗಾಲ ಆವರಿಸಿದ್ದು, ರಾಜ್ಯ ಸರಕಾರ ಈ ಕುರಿತು ಗಮನ ಹರಿಸದೇ ರೈತರನ್ನು ನಿಕೃಷ್ಟವಾಗಿ ಕಾಣುತ್ತಿದೆ. ಸಿದ್ಧರಾಮಯ್ಯ ನೇತೃತ್ವದ ಸರಕಾರ ಬರ ಪರಿಹರಿಸುವ ನಿಟ್ಟಿನಲ್ಲಿ ಹಣ ಬಿಡುಗಡೆ ಮಾಡದಿದ್ದಲ್ಲಿ ಬಿಜೆಪಿ ಪಕ್ಷ ರೈತರನ್ನು ಸೇರಿಸಿಕೊಂಡು ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.
ಪುತ್ತೂರು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಜ್ಯದ 216 ತಾಲೂಕುಗಳಲ್ಲಿ ಬರ ಆವರಿಸಿರುವ ಕುರಿತು ಸರಕಾರವೇ ಪ್ರಕಟಣೆ ಹೊರಡಿಸಿದೆ. ಸುಮಾರು 36 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಒಣಗಿದೆ. 3 ಲಕ್ಷ ಹೆಕ್ಟೇರ್ ತೋಟ ನೀರಿಲ್ಲದೆ ಬೆಳೆಯೂ ಇಲ್ಲದಾಗಿ, ರೈತ ಕಂಗಾಲಾಗಿದ್ದಾನೆ. ಜಾನುವಾರುಗಳಿಗೆ ನೀರಿಲ್ಲ. ಗೋಶಾಲೆಗೆ ಸೇರಿಸಲು ಸರಕಾರದ ಅನುಮತಿ ಇಲ್ಲ. ಈ ನಿಟ್ಟಿನಲ್ಲಿ ರಾಜಕಾರಣ ಬಿಟ್ಟು ರಾಜ್ಯ ಸರಕಾರ ರೈತರತ್ತ ಧಾವಿಸಬೇಕಾಗಿದೆ ಎಂದು ಆಗ್ರಹಿಸಿದ ಅವರು, ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಜನಾದೇಶದ ಮೂಲಕ ಆಡಳಿತಕ್ಕೆ ಬಂದ ಸರಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ಬಿಜೆಪಿ ಸರಕಾರ 17 ಜನರ ತಂಡ ಕಟ್ಟಿ 31 ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಅಧ್ಯಯನ ಮಾಡಿತ್ತು. ಆದರೆ ಕಾಂಗ್ರೆಸ್ ಒಬ್ಬ ಮಂತ್ರಿಯೂ ರೈತರ ಬಳಿಗೆ ಹೋಗುತ್ತಿಲ್ಲ. ಕೇಂದ್ರ ಸರಕಾರದ ಯೋಜನೆಯಾದ ಕಿಸಾಸ್ ಸಮ್ಮಾನ್ ಯೋಜನೆಯಿಂದ ರಾಜ್ಯದ 54 ಲಕ್ಷ ರೈತರಿಗೆ ಹಣ ಬರುತ್ತಿದ್ದು, ರಾಜ್ಯ ಸರಕಾರ ಕಿಸಾನ್ ಸಮ್ಮಾನ್ ಯೋಜನೆಯನ್ನು ಸ್ಥಗಿತಗೊಳಿಸಿದೆ. ಕೇಂದ್ರ ಸರಕಾರ ಇಪ್ಪತ್ತೆರಡುವರೆ ಲಕ್ಷ ಟನ್ ಅಕ್ಕಿಯನ್ನು ಪ್ರತೀ ತಿಂಗಳು ರಾಜ್ಯ ಸರಕಾರಕ್ಕೆ ನೀಡುತ್ತಿದೆ. ಆದರೆ ರಾಜ್ಯ ಸರಕಾರ ಬಡವರ ಹೆಸರಿನಲ್ಲಿ ಇದನ್ನು ನೀಡದೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದರು.
ಗ್ಯಾರಂಟಿಗಳಲ್ಲಿ ಒಂದಾದ ಪದವೀಧರರಿಗೆ ಯುವನಿಧಿ ಘೋಷಣೆ ಮಾಡಿ ಆರು ತಿಂಗಳಾಯಿತು. ಆದರೆ ಇನ್ನೂ ಕೂಡ ಒಂದೂ ನಯಾಪೈಸೆ ನೀಡಿಲ್ಲ ಎಂದ ಅವರು, ಅಧಿಕಾರ ವಿಕೇಂದ್ರಿಕರಣಕ್ಕೆ ಒತ್ತು ನೀಡಿ, ಅದಕ್ಕೆ ಪೂರಕವಾಗಿ ಜಾತಿ-ಆದಾಯ, ವಿವಾಹ ನೋಂದಣಿ, ಜನನ-ಮರಣ ಪ್ರತಿಗಳನ್ನು ನೀಡುವ ಅಧಿಕಾರವನ್ನು ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಒಬಿಸಿ ಮೋರ್ಚಾದ ಆರ್.ಸಿ. ನಾರಾಯಣ, ಗ್ರಾಮಾಂತರ ಮಂಡಲ ಕಾರ್ಯದರ್ಶಿ ನಿತೇಶ್ ಕುಮಾರ್ ಶಾಂತಿವನ, ನಗರ ಮಂಡಲ ಕಾರ್ಯದರ್ಶಿಗಳಾದ ಯುವರಾಜ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ, ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.