ಪುತ್ತೂರು: ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯ ಆಟಗಾರರ ನಿಗದಿತ 12 ತಂಡಗಳ ಪ್ರೊ. ವಾಲಿಬಾಲ್ ಪಂದ್ಯಾಟ, ಆಟೋಟ ಸ್ಪರ್ಧೆ, ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಅಶಕ್ತ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ ನ. 11ರಂದು ಪುಣ್ಚತ್ತಾರಿನಲ್ಲಿ ನಡೆಯಲಿದೆ ಎಂದು ಕ್ಲಬ್ಬಿನ ಸಕ್ರೀಯ ಸದಸ್ಯ ರವೀಂದ್ರ ಅನಿಲ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭವನ್ನು ನಿವೃತ್ತ ಯುವಜನ ಸೇವಾ ಕ್ರೀಡಾಧಿಕಾರಿ ಬಿ.ಕೆ. ಮಾಧವ ಉದ್ಘಾಟಿಸಲಿದ್ದು, ಪುಣ್ಚತ್ತಾರು ಶ್ರೀಹರಿ ಭಜನಾ ಮಂಡಳಿ ಗೌರವಾಧ್ಯಕ್ಷ ಐ.ನಾರಾಯಣ ಗೌಡ ಇಡ್ಯಡ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕರಿಮಜಲು ಪೈಕ ಗ್ರಾಮ ದೈವಸ್ಥಾನದ ಆನುವಂಶಿಕ ಮೊಕ್ತೇಸರ ಪುಟ್ಟಣ್ಣ ಗೌಡ ಪೈಕ, ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ನಾಗೇಶ್ ರೈ ಮಾಳ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಂಜೆ 7 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ ಗೌರವಾಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ ವಹಿಸಲಿದ್ದು, ದ.ಕ. ಎಡಿಷನಲ್ ಎಸ್.ಪಿ. ಧರ್ಮಪ್ಪ ಎನ್.ಎಂ. ಕಾರ್ಯಕ್ರಮ ಉದ್ಘಾಟಿಸುವರು. ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ, ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ತುಂಬೆ ಬಿಎ ಐಟಿಐ ಪ್ರಾಂಶುಪಾಲ ನವೀನ್ ಕುಮಾರ್ ಕೆ.ಎಸ್., ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮೊದಲಾದವರು ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಸಮಾಜರತ್ನ ಲೀಲಾಧರ್ ಶೆಟ್ಟಿ ಸಾರಥ್ಯದ ಕಾವು ರಂಗತರಂಗ ಕಲಾವಿದರಿಂದ ‘ಅಧ್ಯಕ್ಷೆರ್’ ತುಳು ಹಾಸ್ಯಮಯ ಸಾಂಸಾರಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಸ್ಥಾಪಕ ಅಧ್ಯಕ್ಷ ರಾಧಾಕೃಷ್ಣ ಪೈಕ, ಅಧ್ಯಕ್ಷ ಹರೀಶ್ ಪೈಕ, ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ ಉಪಸ್ಥಿತರಿದ್ದರು.