ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಜಲ್ಲಿ ಸಾಗಾಟದ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದ ಘಟನೆ ಬಂಟ್ವಾಳದ ಲೊರೆಟ್ಟೋ ಎಂಬಲ್ಲಿ ನಡೆದಿದೆ. ಬೃಹತ್ ಗಾತ್ರದ ಲಾರಿಗಳ ಅಟ್ಟಹಾಸದಿಂದ ಬೇಸತ್ತಿದ್ದ ಸ್ಥಳೀಯರು, ಇದೇ ಸಂದರ್ಭ ಪ್ರತಿಭಟನೆ ನಡೆಸಿದರು.
ಮೂಡುಬಿದರೆ ಆಳ್ವಾಸ್ ಕಾಲೇಜಿಗೆ ತೆರಳುತ್ತಿದ್ದ ಮೈಸೂರು ಮೂಲದ ಕೃಷ್ಣ ಅರಸ ಅಪಾಯದಿಂದ ಪಾರಾಗಿದ್ದಾರೆ. ಕಾರಿಗೆ ಲಾರಿ ಮುಖಾಮುಖಿ ಢಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಬಿಸಿರೋಡಿನಿಂದ ಅಡ್ಡಹೊಳೆವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆಯನ್ನು ಕೆ.ಎನ್.ಆರ್.ಸಿ. ಕಂಪೆನಿ ಗುತ್ತಿಗೆ ವಹಿಸಿಕೊಂಡಿದೆ. ಕಾಮಗಾರಿಗಾಗಿ ಕುಪ್ಪೆಪದವಿನ ಜಲ್ಲಿ ಪ್ಲ್ಯಾಂಟ್ ನಿಂದ ಬೃಹತ್ ಗಾತ್ರದ ಲಾರಿಗಳ ಮೂಲಕ ಜಲ್ಲಿಯನ್ನು ತರಲಾಗುತ್ತಿತ್ತು. ಆದರೆ ಕಂಪೆನಿಯ ಲಾರಿ ಚಾಲಕರು ಎ.ಸಿ ಹಾಕಿಕೊಂಡು, ಕಿವಿಗೊಂದು ಇಯರ್ ಪೋನ್ ಸಿಕ್ಕಿಸಿ ಹಾಡು ಕೇಳಿಕೊಂಡು ಅಥವಾ ಮೊಬೈಲ್ ನಲ್ಲಿ ಹರಟೆ ಹೊಡೆಯುತ್ತಾ ಸಾಗುತ್ತಾರೆ. ರಸ್ತೆಯಲ್ಲಿ ಬರುವ ಇತರ ವಾಹನಗಳ ಬಗ್ಗೆ ಗಮನವಿಲ್ಲದೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಲಾರಿ ಚಲಾಯಿಸುತ್ತಾರೆ. ಹಾಗಾಗಿ ಕಳೆದ ಎರಡು ವರ್ಷಗಳಿಂದ ಕಂಪೆನಿಯ ಲಾರಿಗಳು ಡಿಕ್ಕಿಯಾಗಿ ಅನೇಕರಿಗೆ ಗಾಯವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಕಂಪೆನಿಯ ಘನಗಾತ್ರದ ವಾಹನಗಳ ಸಂಚಾರದಿಂದ ಪ್ರಾಣಹಾನಿಯ ಜೊತೆಗೆ ಉತ್ತಮವಾಗಿದ್ದ ಡಾಮರು ರಸ್ತೆ ಅಲ್ಲಲ್ಲಿ ಹೊಂಡಗಳು ಬಿದ್ದಿವೆ ಎಂದು ಆರೋಪಿಸಿದರು. ಸಮೀಪದಲ್ಲೇ ಶಾಲೆಯಿದ್ದು, ಮಕ್ಕಳು ಶಾಲೆಗೆ ಬರುವ ಸಮಯದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆ ಮಾಡಿದರೆ ಅನಾಹುತಗಳು ನಡೆಯಬಹುದು. ಆದ್ದರಿಂದ ಕಂಪನಿ ವಿರುದ್ದ ಪ್ರಕರಣ ದಾಖಲಿಸಿ ಮತ್ತು ಕಂಪನಿ ಲಾರಿಗಳಿಗೆ ಸ್ಪೀಡ್ ಕಂಟ್ರೋಲ್ ಕಿಟ್ ಹಾಕಿ ಎಂದು ಸಾರ್ವಜನಿಕರು ಒತ್ತಾಯಿಸಿದರು.
ಸ್ಥಳಕ್ಕೆ ಟ್ರಾಫಿಕ್ ಎಸ್.ಐ. ಸುತೇಶ್, ಸಂಜೀವ, ಎಎಸ್.ಐ ಸುರೇಶ್ ಪಡಾರ್, ಸಿಬ್ಬಂದಿಗಳಾದ ರಾಜು, ವಿವೇಕ್, ಸಂತೋಷ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.