ಪುತ್ತೂರು: ಸೋಮವಾರ ತಡರಾತ್ರಿ ಹತ್ಯೆಗೀಡಾದ ಅಕ್ಷಯ್ ಕಲ್ಲೇಗ ಅವರ ಶೇವಿರೆ ಮನೆಗೆ ಶಾಸಕ ಅಶೋಕ್ ಕುಮಾರ್ ರೈ ಮಂಗಳವಾರ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಅಕ್ಷಯ್ ಕಲ್ಲೇಗ ಕೊಲೆ ಅನಿರೀಕ್ಷಿತ, ಆ ಯುವಕ ತನ್ನ ಗೆಳೆಯರಿಂದಲೇ ಕೊಲೆಗೀಡಾಗಿರುವುದು ಖೇದಕರವಾಗಿದೆ. ಕಾನೂನು ಪ್ರಕಾರ ಯಾವ ರೀತಿ ಶಿಕ್ಷೆ ಆಗಬೇಕೋ ಅದು ಆಗಲೇ ಬೇಕು. ಜನತೆ ಭಯ ಪಡುವ ಅಗತ್ಯವಿಲ್ಲ. ವೈಮನಸ್ಸಿನಿಂದ ಮಾತಿಗೆ ಮಾತು ಬೆಳೆದು ನಡೆದ ಈ ಕೃತ್ಯ ಎಸಗಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಆರೋಪಿಗಳಿಗೆ ಶಿಕ್ಷೆ ಆದ ಬಳಿಕ ಅವರು ಜಾಮೀನು ಪಡೆದು ಹೊರ ಬರುವಾಗ ಅವರನ್ನು ಜನರು ನೋಡುವ ದೃಷ್ಟಿಯೇ ಬದಲಾಗಿದೆ. ಇವತ್ತು ನಮ್ಮ ಕಾನೂನಿನಲ್ಲಿ ಬದಲಾವಣೆ ಆಗುವ ಅವಶ್ಯಕತೆ ಇದೆ. ಇವತ್ತು ಬಂಧನವಾದವರು 3 ತಿಂಗಳ ಬಳಿಕ ಹೊರ ಬರುತ್ತಾರೆ. ಈ ನಿಟ್ಟಿನಲ್ಲಿ ವಿದೇಶದಂತೆ ಮೂರು ತಿಂಗಳ ಒಳಗೆ ಶಿಕ್ಷೆ ವಿಧಿಸಬೇಕು.ಇಂತಹ ಕಾನೂನು ನಮ್ಮಲ್ಲಿ ಬರಬೇಕೆಂದರು.
ರಾತ್ರಿ ಸಮಯ ಅಲ್ಲಲ್ಲಿ ಗುಂಪು ಸೇರುವುದು ಇಂತಹ ಆಂತಕಕಾರಿ ಘಟನೆಗಳಿಗೆ ಕಾರಣಾವಾಗುತ್ತಿದೆ. ರಾತ್ರಿ 11 ಗಂಟೆ ಬಳಿಕ ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರುವುದನ್ನು ನಿಲ್ಲಿಸುವಂತೆ ಪೊಲೀಸರಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.