ಪುತ್ತೂರು: ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಹತ್ಯೆಗೆ ಸಂಬಂಧಿಸಿದಂತೆ ಮೂವರಿ ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬನ್ನೂರು ಜೈನರಗುರಿ ನಿವಾಸಿ ಚೇತು ಅಲಿಯಾಸ್ ಚೇತನ್, ಮಂಜು ಯಾನೆ ಮಂಜುನಾಥ ಹಾಗೂ ಪಡೀಲು ನಿವಾಸಿ ಮನೀಶ್ ಮಣಿಯಾಣಿ ಪೊಲೀಸ್ ವಶದಲ್ಲಿದ್ದಾರೆ. ಇನ್ನೋರ್ವ ಆರೋಪಿ ಕೇಶವ ಎಂಬಾತ ಇನ್ನಷ್ಟೇ ಪೊಲೀಸರಿಗೆ ಶರಣಾಗಬೇಕಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರ ತಡರಾತ್ರಿ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳು ಹಾಗೂ ಅಕ್ಷಯ್ ಮಧ್ಯೆ ಚರ್ಚೆಗಳು ನಡೆದಿವೆ. ಇದು ತಾರಕಕ್ಕೇರಿ ಅಕ್ಷಯ್ ಕಲ್ಲೇಗ (24) ಅವರನ್ನು ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ನೆಹರೂ ನಗರದ ವಿವೇಕಾನಂದ ಕಾಲೇಜು ರಸ್ತೆಯಲ್ಲಿ ಈ ಹತ್ಯೆ ನಡೆದಿತ್ತು ಎನ್ನಲಾಗಿದೆ. ಮಾತುಕತೆಗೆ ಬರಲು ಹೇಳಿ ದಾಳಿ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಕಾಲೇಜು ರಸ್ತೆಯಲ್ಲಿ ದಾಳಿ ಮಾಡುತ್ತಿದ್ದಂತೆ ಅಕ್ಷಯ್ ಅಲ್ಲಿಂದ ಓಡಿದ್ದು, ದುಷ್ಕರ್ಮಿಗಳ ತಂಡ ಬೆನ್ನಟ್ಟಿಕೊಂಡು ಹೋಗಿದೆ. ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಈ ಘಟನೆ ನಡೆದಿದೆ. ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಮಾರಕ ದಾಳಿಗೆ ತುತ್ತಾದ ಅಕ್ಷಯ್ ಹೆದ್ದಾರಿಯ ಇನ್ನೊಂದು ಭಾಗದ ಖಾಲಿ ಜಾಗದ ಪೊದೆಯ ಪಕ್ಕದಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿದರು. ಬಳಿಕ ಅಕ್ಷಯ್ ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ಸಾಗಸಿದ್ದಾರೆ ಎನ್ನಲಾಗಿದೆ.