ಬೆಂಗಳೂರು: ಗಣಿ-ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೋರ್ವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಂದು ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಣಿ-ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಧಿಕಾರಿ.
ಪ್ರತಿಮಾ ಅವರು ದೊಡ್ಡಕಲ್ಲಸಂದ್ರದ ಅಪಾರ್ಟೆಂಟ್ವೊಂದರಲ್ಲಿ ಒಬ್ಬರೇ ವಾಸಿಸುತ್ತಿದ್ದರು. ವಿವಾಹಿತರಾಗಿದ್ದು, ಪ್ರತಿಮಾ ಪತಿ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಿದ್ದರು. ರಾತ್ರಿ ಪ್ರತಿಮಾ ಅವರಿಗೆ ಸಹೋದರ ಕರೆ ಮಾಡಿದ್ದ ಆದರೆ ಕರೆ ಸ್ವೀಕರಿಸಿರಲಿಲ್ಲ. ಬೆಳಿಗ್ಗೆ ಮನೆ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಶನಿವಾರ ರಾತ್ರಿ 8 ಗಂಟೆಗೆ ಪ್ರತಿಮಾ ಅವರನ್ನು ಕಚೇರಿಯಿಂದ ಮನೆಗೆ ಡ್ರಾಪ್ ಮಾಡಿ ಕಾರು ಚಾಲಕ ಹೋಗಿದ್ದ. ಬಳಿಕ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪ್ರತಿಮಾ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
2017ರಲ್ಲಿ ರಾಮನಗರದಲ್ಲಿ 3 ವರ್ಷ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಪ್ರತಿಮಾ ಅವರು ಬಳಿಕ ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. ಬೆಂಗಳೂರಿನ ಗ್ರಾಮಾಂತರ ಭೂಗರ್ಭ ಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಪ್ರತಿಮಾ ಅವರು ಬಳಿಕ ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. ಬೆಂಗಳೂರಿನ ಗ್ರಾಮಾಂತರ ಭೂಗರ್ಭ ಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿರುವ ಸುಬ್ರಹ್ಮಣ್ಯನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ. ಹೀಗಾಗಿ ಇದೊಂದು ಪೂರ್ವ ನಿಯೋಜಿತ ಹತ್ಯೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರತಿಮಾ ಅವರ ಮನೆಗೆ ಡಿಸಿಪಿ ರಾಹುಲ್ ಶಹಪುರವಾಡ್ ತೆರಳಿ ಪರಿಶೀಲನೆ ನಡೆಸಿದ್ದಾರೆ.