ದೂರು ಕೊಡಬೇಡಿ, ಹೆಂಡತಿ ಮಕ್ಕಳಿದ್ದಾರೆ ಎಂದು ಕ್ಷಮೆ ಯಾಚಿಸಿದ್ದ
ಹೊಸದಿಲ್ಲಿ : ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಶಂಕರ್ ಮಿಶ್ರಾ ಎಂಬಾತನನ್ನು ಅಮೆರಿಕದ ಕಂಪನಿ ನೌಕರಿಯಿಂದ ಕೆಲಸದಿಂದ ವಜಾಗೊಳಿಸಿದೆ. ಯುನೈಟೆಡ್ ಸ್ಟೇಟ್ಸ್ ಹಣಕಾಸು ಸೇವೆಗಳ ಕಂಪನಿ ವೆಲ್ಸ್ ಫಾರ್ಗೋದಲ್ಲಿ ಆತ ಉದ್ಯೋಗಿಯಾಗಿದ್ದ.
ಶಂಕರ್ ಮಿಶ್ರಾ ವಿರುದ್ಧದ ಆರೋಪ ತುಂಬ ‘ಗಾಢವಾಗಿ ಮನಸ್ಸನ್ನು ಕಲಕಿದೆ’. ಈ ವ್ಯಕ್ತಿಯನ್ನು ವೆಲ್ ಫಾರ್ಗೋದಿಂದ ವಜಾಗೊಳಿಸಲಾಗಿದೆ ಎಂದು ಅಮೆರಿಕದ ವೆಲ್ಸ್ ಫಾರ್ಗೋ ಕಂಪನಿ ಹೇಳಿದೆ. ಕಂಪನಿಯು ತನ್ನ ಉದ್ಯೋಗಿಗಳಿಂದ ವೃತ್ತಿಪರ ಮತ್ತು ವೈಯಕ್ತಿಕ ಉತ್ತಮ ನಡವಳಿಕೆಯನ್ನು ಬಯಸುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಹೇಳಿದೆ.
ಕಳೆದ ನವೆಂಬರ್‌ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಶಂಕರ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ತನ್ನ ಕೃತ್ಯಕ್ಕಾಗಿ ಶಂಕರ್ ಮಿಶ್ರಾ ಸಂತ್ರಸ್ತೆಯ ಬಳಿ ಕ್ಷಮೆಯಾಚಿಸಿದ್ದಾನೆ. ಅಲ್ಲದೆ ತನಗೆ ಕುಟುಂಬ ಇದ್ದು, ತನ್ನ ವಿರುದ್ಧ ಕೇಸ್ ದಾಖಲಿಸಬೇಡಿ. ಹೆಂಡತಿ ಮತ್ತು ಮಗುವಿಗೆ ತೊಂದರೆಯಾಗುತ್ತದೆ ಎಂದು ಬೇಡಿಕೊಂಡಿದ್ದ ಎನ್ನಲಾಗಿದೆ.
ಸಂತ್ರಸ್ತ ಮಹಿಳೆ ಏರ್ ಇಂಡಿಯಾಗೆ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಬುಧವಾರ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಅದರಲ್ಲಿ ಆರೋಪಿ ತನ್ನ ವಿರುದ್ಧ ಕೇಸ್ ದಾಖಲಿಸಬೇಡಿ ಎಂದು ಬೇಡಿಕೊಂಡಿರುವುದಾಗಿ ಉಲ್ಲೇಖಿಸಲಾಗಿದೆ.
ತನ್ನ ಇಚ್ಛೆಯ ವಿರುದ್ಧವಾಗಿ ಆರೋಪಿಯ ಜೊತೆ ಮಾತುಕತೆ ನಡೆಸಿ, ರಾಜಿ ಮಾಡಿಕೊಳ್ಳುವಂತೆ ತನಗೆ ಒತ್ತಾಯಿಸಲಾಯಿತು ಎಂದು ಮಹಿಳೆ ಆರೋಪಿಸಿದ್ದಾರೆ.
ನವೆಂಬರ್ 26 ರಂದು AI 102 ಬೋರ್ಡ್‌ನಲ್ಲಿ ಮಧ್ಯಾಹ್ನದ ಊಟ ಬಡಿಸಿದ ನಂತರ ಮತ್ತು ದೀಪಗಳನ್ನು ಆಫ್ ಮಾಡಿದ ಸ್ವಲ್ಪ ಸಮಯದ ನಂತರ, ಬಿಸಿನೆಸ್ ಕ್ಲಾಸ್ ಸೀಟ್ 8A ಯಲ್ಲಿ ಶಂಕರ್ ಮಿಶ್ರಾ ಮದ್ಯದ ಅಮಲಿನಲ್ಲಿ ವಯಸ್ಸಾದ ಮಹಿಳೆಯ ಸೀಟ್ ಬಳಿ ಹೋಗಿ ಮೂತ್ರ ವಿಸರ್ಜಿಸಿದ್ದಾನೆ. ಈ ಘಟನೆ ಬೆಳಕಿಗೆ ಬಂದ ಬಳಿಕ ಭಾರಿ ವಿವಾದ ಸೃಷ್ಟಿಯಾಗಿದೆ.