ಉಪ್ಪಿನಂಗಡಿ: ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ 25 ವರ್ಷಗಳಷ್ಟಾದರೂ ಭವಿಷ್ಯದ ಚಿಂತನೆಯಿರಬೇಕು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಅಭಿವೃದ್ಧಿಯೂ ಇದೇ ರೀತಿ ನಡೆಯಬೇಕಿದ್ದು, ಬರುವ ಭಕ್ತರಿಗೆ ಉತ್ತಮ ಇಲ್ಲಿ ವ್ಯವಸ್ಥೆ ಮಾಡಿಕೊಡುವ ಕಾರ್ಯವಾಗಬೇಕು. ಪುಣ್ಯಕ್ಷೇತ್ರವಾಗಿರುವ ಈ ಸಂಗಮ ಕ್ಷೇತ್ರವನ್ನು ಪ್ರವಾಸೋದ್ಯಮ ಕೇಂದ್ರವಾಗಿಯೂ ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಅಭಿವೃದ್ಧಿಯ ವಿಚಾರವಾಗಿ ದೇವಾಲಯದ ಸಭಾಂಗಣದಲ್ಲಿ ನಡೆದ ಹಾಲಿ ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಮತ್ತು ಭಕ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಇಲ್ಲೇ ಪಕ್ಕದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವಿದೆ. ಅಲ್ಲಿಗೆ ಬರುವ ಭಕ್ತಾದಿಗಳು ಅದೇ ದಾರಿಯಲ್ಲಿ ಸಿಗುವ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಗೆ ಬಂದು ಅಲ್ಲಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಸನ್ನಿಧಿಗೂ ಭೇಟಿ ನೀಡುವಂತಾಗಬೇಕು. ಅದಕ್ಕೆ ಬೇಕಾದ ಅಭಿವೃದ್ಧಿ ಕಾರ್ಯಗಳು ಶ್ರೀ ಕ್ಷೇತ್ರಗಳಲ್ಲಿ ನಡೆಯಬೇಕಿದೆ. ಈಗಾಗಲೇ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೆರೆಗೆ ಕಾರಂಜಿ, ಬೆಳಕಿನ ವ್ಯವಸ್ಥೆ, ರಸ್ತೆ, ಕಟ್ಟಡದ ವ್ಯವಸ್ಥೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಬೀರಮಲೆಗುಡ್ಡೆಯನ್ನೂ ಅಭಿವೃದ್ಧಿ ಮಾಡಿ ಅದನ್ನು ಲೈಟಿಂಗ್ಸ್ ಪ್ಯಾಲೇಸ್ ಆಗಿ ಮಾಡುವ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಲ್ಲಿ ನದಿಗಳ ಸಂಗಮ ತಾಣದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿ ಕೂಡಲ ಸಂಗಮದಂತೆ ಉಪ್ಪಿನಂಗಡಿಯ ಸಂಗಮ ಕ್ಷೇತ್ರವನ್ನು ಮಾಡಲು 370 ಕೋಟಿ.ರೂ.ನ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಯೋಜನೆ ಅನುಷ್ಠಾನಗೊಂಡರೆ ನದಿ ನೀರಿಗೆ ವಿದ್ಯುತ್ ದೀಪದ ಬೆಳಕು ಹಾಯಿಸಿ, ನದಿಯಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಿ ಈ ಕ್ಷೇತ್ರವನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಲಾಗುವುದು ಎಂದರು.
ದೇವಸ್ಥಾನಗಳಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದ ನೀಡಬಾರದು. ಜನರ ದುಡ್ಡನ್ನು ನಾವು ಅಭಿವೃದ್ಧಿಗಾಗಿ ಖರ್ಚು ಮಾಡುವಾಗ ಸೂಕ್ತ ರೂಪುರೇಷೆ ನಿರ್ಮಿಸಿ ಆ ಯೋಜನೆ ಜನರಿಗೆ ಪ್ರಯೋಜನವಾಗುವ ಹಾಗೆ ನೋಡಿಕೊಳ್ಳಬೇಕು. ಬಂದ ಭಕ್ತರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆಗೂ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾಗಿದೆ. ಪಾರ್ಕಿಂಗ್‌ಗೂ ಆದ್ಯತೆ ನೀಡಬೇಕಿದೆ. ಇಲ್ಲಿ ದಿನಾ ಅನ್ನಸಂತರ್ಪಣೆ ನಡೆಸಬೇಕೆಂಬ ಬೇಡಿಕೆ ಭಕ್ತರಿಂದ ಬರುತ್ತಿದ್ದು, ಅದಕ್ಕೂ ಪ್ರತ್ಯೇಕ ಭೋಜನಾಲಯದ ವ್ಯವಸ್ಥೆ ಮಾಡಬೇಕಾಗಿದೆ ಎಂದರು.
ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಶಾಸಕರೊಂದಿಗೆ ಮಾತನಾಡಿ, ನಮ್ಮ ಅವಧಿಯಲ್ಲಿ ದೇವಾಲಯದಲ್ಲಿ ಮೂರುವರೆ ಕೋಟಿ ರೂ. ಉಳಿತಾಯ ಇದೆ. ಇದರಲ್ಲಿ ಒಂದೂವರೆ ಕೋಟಿ ರೂ.ವನ್ನು ದೇವಸ್ಥಾನಕ್ಕೆ ಜಾಗ ಖರೀದಿಸಲು ಇಡಲಾಗಿದೆ. ಉಳಿದ ಒಂದೂವರೆ ಕೋಟಿಯಲ್ಲಿ ದೇವಾಲಯದ ಹಿಂಭಾಗದಲ್ಲಿ ಸಭಾಂಗಣವನ್ನು ಕಟ್ಟುವ ಯೋಜನೆ ಹಾಕಿಕೊಳ್ಳಲಾಗಿದ್ದು, ವಾಸ್ತ್ರು ಪ್ರಕಾರವಾಗಿ ಇದಕ್ಕೆ ಮಾಸ್ಟರ್ ಪ್ಲಾನ್ ಮಾಡಲಾಗಿದೆ. 49 ಲಕ್ಷ ರೂ.ನಲ್ಲಿ ಸಭಾಂಗಣ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಅಲ್ಲದೇ 11 ಕೋಟಿ ರೂ. ವೆಚ್ಚದಲ್ಲಿ ಮೋಕ್ಷಧಾಮ ನಿರ್ಮಾಣದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಈಗಾಗಲೇ ನಿರ್ಮಾಣಗೊಂಡಿರುವ ನೇತ್ರಾವತಿ ಸಮುದಾಯ ಭವನದ ಕಾಮಗಾರಿ ಕಳಪೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಅದರ ಮೇಲ್ಗಡೆ ಮತ್ತೊಂದು ಮಹಡಿ ಕಟ್ಟುವ ಯೋಜನೆ ಅರ್ಧದಲ್ಲಿ ನಿಂತಿದೆ. ಆದ್ದರಿಂದ ಈ ಸಮುದಾಯ ಭವನದ ಕ್ವಾಲಿಟಿ ಚೆಕ್ ಮಾಡಬೇಕಿದೆ. ಅಲ್ಲಿ ಕಾಮಗಾರಿ ಕಳಪೆಯಾಗಿರುವುದು ಕಂಡುಬಂದರೆ, ಗುತ್ತಿಗೆದಾರರಿಗೆ ಈಗಾಗಲೇ ಅಪೂರ್ಣವಾಗಿರುವ ಯೋಜನೆಯ ಕೆಲಸದ ಬಿಲ್ ಮಾಡುವುದು ಬೇಡ. ಬೇರೆಯೇ ಗುತ್ತಿಗೆದಾರರ ಮೂಲಕ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸೋಣ. ನೂತನ ಸಭಾಂಗಣ ನಿರ್ಮಾಣಕ್ಕೆ ಆಗಿರುವ ಟೆಂಡರನ್ನು ರದ್ದು ಪಡಿಸೋಣ ಎಂದರಲ್ಲದೆ, ಮೋಕ್ಷಧಾಮದ ನೀಲನಕ್ಷೆಯನ್ನು ಪರಿಶೀಲಿಸಿ, ಐದು ಮಹಡಿಯ ಈ ಕಟ್ಟಡದ ತಳ ಅಂತಸ್ತಿನಲ್ಲಿ ನೀರು ನಿಲ್ಲುವುದರಿಂದ ಫಿಲ್ಲರ್ ಮೂಲಕ ಎತ್ತರಿಸಿ ನದಿಯ ಮೇಲ್ಗಡೆಯಿಂದ ಕಟ್ಟಡ ನಿರ್ಮಾಣ ಮಾಡೋಣ. ಶ್ರೀ ಕ್ಷೇತ್ರದ ಪ್ರಮುಖ ಆದಾಯ ಪಿಂಡ ಪ್ರಧಾನದಿಂದ ಆಗಿರುವುದರಿಂದ ಇಲ್ಲಿ ಪಿಂಡ ಪ್ರಧಾನಕ್ಕೆ ಎರಡು ಅಂತಸ್ತು ಮೀಸಲಿಟ್ಟು, ಉಳಿದ ಅಂತಸ್ತುಗಳನ್ನು ಉತ್ತರ ಕ್ರಿಯೆಯ ಊಟಕ್ಕೆ ಮೀಸಲಿಡೋಣ. ಪಿಂಡ ಪ್ರಧಾನ ಮತ್ತು ಉತ್ತರ ಕ್ರಿಯೆಯ ಊಟದ ವ್ಯವಸ್ಥೆ ಒಂದೇ ಕಟ್ಟಡದಲ್ಲಿದ್ದರೆ ಪಿಂಡ ಪ್ರದಾನಕ್ಕೆ ಬರುವವರಿಗೆ ಅನುಕೂಲವಾಗುತ್ತದೆ. ಈ ಕಟ್ಟಡದಲ್ಲಿ ಲಿಫ್ಟ್‌ನ ವ್ಯವಸ್ಥೆಯನ್ನೂ ಮಾಡಬೇಕು. ಉತ್ತರ ಕ್ರಿಯೆಯ ಊಟಕ್ಕೆ ಆಹಾರ- ಪದಾರ್ಥಗಳನ್ನು ತರಲು ಹಾಗೂ ಜನರು ಹೋಗಲು ಎರಡು ಪ್ರತ್ಯೇಕ ಲಿಫ್ಟ್‌ನ ವ್ಯವಸ್ಥೆ ಆಗಬೇಕಿದೆ. ಈಗಾಗಲೇ ಕಟ್ಟಡದ ನೀಲನಕಾಶೆಯಲ್ಲಿರುವಂತೆ ಇಲ್ಲಿ ವಸತಿಗೃಹಗಳು ಬೇಡ. ಇದರ ನೀಲನಕಾಶೆಯನ್ನು ಸ್ವಲ್ಪ ಬದಲಾವಣೆ ಮಾಡೋಣ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಲೆಕ್ಸ್ ಲೈಂಗಲ್ ಸಂಸ್ಥೆಯ ರಾಯಲ್ ಪೀಟರ್ ಹಾಗೂ ರಘುವೀರ್ ಅವರು ವಿದ್ಯುತ್ ಬೆಳಕನ್ನು ಹಾಯಿಸಿ ದೇವಸ್ಥಾನವನ್ನು ಯಾವ ರೀತಿ ಆಕರ್ಷಣೀಯವನ್ನಾಗಿ ಮಾಡಬಹುದು ಎಂಬುದರ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಶ್ರೀ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ರಾಧಾಕೃಷ್ಣ ನಾಯಕ್ ಉಪಸ್ಥಿತರಿದ್ದರು. ಸಭೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯ ಧನಂಜಯ ಕುಮಾರ್, ವಿನಾಯಕ ಪೈ, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರಿರಾಮಚಂದ್ರ, ಜಯಂತ ಪೊರೋಳಿ, ಸುನೀಲ್ ಎ., ಹರಿಣಿ ಕೆ., ಪ್ರೇಮಲತಾ ಕಾಂಚನ, ಮಾಜಿ ಸದಸ್ಯರಾದ ಡಾ. ರಾಜಾರಾಮ್ ಕೆ.ಬಿ., ಕೃಷ್ಣರಾವ್ ಆರ್ತಿಲ, ಶ್ರೀಮತಿ ಸವಿತಾ ಹರೀಶ್, ಪ್ರಮುಖರಾದ ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ರೂಪೇಶ್ ರೈ ಅಲಿಮಾರ್, ದೇವಿದಾಸ ರೈ ಬೆಳ್ಳಿಪ್ಪಾಡಿ, ಸೋಮನಾಥ, ಯೋಗೀಶ್ ಸಾಮಾನಿ, ಶಿವಪ್ರಸಾದ್ ರೈ ಮಠಂತಬೆಟ್ಟು, ಶಿವರಾಮ ಶೆಟ್ಟಿ ಗೋಳ್ತಮಜಲು, ಸುಧಾಕರ ಶೆಟ್ಟಿ ಕೋಟೆ, ವಿದ್ಯಾಧರ ಜೈನ್, ಯು. ರಾಮ, ಸಂಜೀವ ಗಾಣಿಗ, ಮಂಜುನಾಥ ಶೆಣೈ, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಸ್ವಾಗತಿಸಿ, ವಂದಿಸಿದರು.