ಪುತ್ತೂರು: ಯಾವುದೇ ಸಾಧನೆಗೆ ಕೌಶಲ್ಯ, ಟ್ಯಾಲೆಂಟ್ ಜತೆಗೆ ಶಕ್ತಿ ಮುಖ್ಯ. ಈ ನಿಟ್ಟಿನಲ್ಲಿ ನಾಳೆ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪುತ್ತೂರಿನ ಕ್ರೀಡಾಪಟುಗಳು ಪುತ್ತೂರಿನ ಕೀರ್ತಿಗೆ ಹಿರಿಮೆ ತರುವಂತಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಭಾನುವಾರ ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.
ಕ್ರೀಡಾಕೂಟ ಸೇರಿದಂತೆ ಇನ್ನಿತರ ಯಾವುದೇ ಕಾರ್ಯಕ್ರಮವಿರಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಗೌರವ ತರಲು ಸಾಧ್ಯ ಎಂದು ಹೇಳಿದ ಅವರು, ಈ ಬಾರಿ ರಾಜ್ಯಮಟ್ಟದ ಕ್ರೀಡಾಕೂಟ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ. ಪುತ್ತೂರಿನ ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಅವಿರತ ಶ್ರಮದಿಂದ ಜಯಗಳಿಸಿ ರಾಜ್ಯಮಟ್ಟದಲ್ಲೂ ಪುತ್ತೂರಿಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ, ಪುತ್ತೂರಿಗೆ ಕೀರ್ತಿ ತರಬೇಕು ಎಂಬ ಉದ್ದೇಶದಿಂದ ಕ್ರೀಡಾಳುಗಳಿಗೆ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದ್ದು, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಬೇಕಾಗಿದೆ ಎಂದರು.
ವೇದಿಕೆಯಲ್ಲಿ ತಾಲೂಕುಧೈಹಿಕ ಶಿಕಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ, ಜಿಲ್ಲಾ ದೈಹಿಕ ಸಂಘದ ಪದಾಧಿಕಾರಿ ರಾಮಣ್ಣ ಗೌಡ ಉಪಸ್ಥಿತರಿದ್ದರು. ತಾಲೂಕು ಧೈಹಿಕ ಶಿಕ್ಷಕ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಸ್ವಾಗತಿಸಿದರು. ಪಾಪೆಮಜಲು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರವೀಣಾ ರೈ ಕಾರ್ಯಕ್ರಮ ನಿರೂಪಿಸಿದರು.