ಮುಂದಿನ ಬಜೆಟ್ ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ : ಮುಖ್ಯಮಂತ್ರಿ ಸಿದ್ಧರಾಮಯ್ಯ

ಉಡುಪಿ: ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಂಟ ಸಮುದಾಯದ ಅಭಿವೃದ್ಧಿಗಾಗಿ ಮುಂದಿನ ಬಜೆಟ್ ನಲ್ಲಿ ‘ಬಂಟರ ಅಭಿವೃದ್ಧಿ ನಿಗಮ’ದ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ ಸಮಾಜಕ್ಕೆ ಭರವಸೆ ನೀಡಿದ್ದಾರೆ.

ನಗರದ ಅಜ್ಜರಕಾಡು ಕ್ರೀಡಾಂಗಣದ ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ನಡೆದ ನಾಲ್ಕನೇ ವಿಶ್ವ ಬಂಟರ ಸಮ್ಮೇಳನ-2023ನ್ನು ದೀಪ ಪ್ರಜ್ವಲನಗೊಳಿಸಿ, ಹಿಂಗಾರ ಅರಳಿಸಿ, ತೆಂಗಿನ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಬಂಟ ಸಮಾಜದ ಅಭಿವೃದ್ಧಿಗಾಗಿ ಕಳೆದ ನಮ್ಮಚುನಾವಣಾ ಪ್ರಣಾಳಿಕೆ ಯಲ್ಲೇ ಬಂಟರ ಅಭಿವೃದ್ಧಿ ನಿಗಮ ಪ್ರಾರಂಭಿ ಸುವ ಘೋಷಣೆ ಮಾಡಿದ್ದೆವು. ಮುಂದಿನ ಬಜೆಟ್‌ನಲ್ಲಿ ಅದನ್ನು ಘೋಷಣೆ ಮಾಡುತ್ತೇವೆ ಎಂದರು.



































 
 

ಬಂಟ ಸಮಯದಾಯ ವಿಶಿಷ್ಟ ಪರಂಪರೆ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಸಮಾಜ. ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಶಿಕ್ಷಣ, ಉದ್ಯಮ, ಕ್ರೀಡೆ, ಸಿನೆಮಾ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಈ ಸಮಾಜ ತನ್ನ ಛಾಪನ್ನು ಮೂಡಿಸಿದೆ. ಬಂಟರು ವಿಶ್ವದ ಯಾವುದೇ ಭಾಗದಲ್ಲಿದ್ದರೂ ಕರಾವಳಿಯ ತಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಮರೆತಿಲ್ಲ. ಅದೇ ಇವರ ಹೆಚ್ಚುಗಾರಿಕೆ ಎಂದು ಪ್ರಶಂಸಿಸಿದರು.

ಮುಖ್ಯ ಅತಿಥಿಯಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಕನ್ನಡ ಚರಿತ್ರೆ ಮತ್ತು ಸಂಸ್ಕೃತಿಗೆ, ಇಡೀ ಸಮಾಜಕ್ಕೆ ಬಂಟ ಸಮುದಾಯದ ಕೊಡುಗೆ ಅಪಾರ. ಎಲ್ಲೆ ಹೋದರೂ ತಮ್ಮತನವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಕಲೆ, ಕ್ರೀಡೆ, ಸಾಹಿತ್ಯ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಬಂಟರ ಸಮುದಾಯದವರನ್ನು ಕಾಣಬಹುದು. ಸ್ವಾತಂತ್ರ್ಯ ಹೋರಾಟದಲ್ಲೂ ಸಮುದಾಯದ ಹಲವು ಮಂದಿ ಪಾಲ್ಗೊಂಡಿದ್ದರು ಎಂದು ಸ್ಮರಿಸಿದರು.

ವಿಧಾನಸಭೆಯ ಸಭಾದ್ಯಕ್ಷ ಯು.ಟಿ.ಖಾದರ್ ಅವರು ಮಾತನಾಡಿ, ಬಂಟರ ಸಮಾಜದ ಪ್ರೀತಿ, ವಿಶ್ವಾಸವನ್ನು ನಾನು ಕಂಡಿದ್ದೇನೆ. ಎಲ್ಲಾ ಸಮಾಜವನ್ನು ಸಮಾನತೆಯಿಂದ ಕಾಣುವ ಈ ಸಮುದಾಯದ ಯುವ ಜನಾಂಗ ಇದೇ ಪರಂಪರೆ ಯನ್ನು ಮುಂದುವರಿಸುವಂತಾಗಬೇಕು. ವಿಶ್ವಾಸಭರಿತ, ಬಲಿಷ್ಠ ಸಮಾಜ ನಿರ್ಮಾಣದ ಗುರಿ ಎಲ್ಲರದಾಗಬೇಕು ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸನ್ಮಾನಿಸಲಾಯಿತು.

ಶಾಸಕರಾದ ಯಶಪಾಲ್ ಸುವರ್ಣ, ಗಣೇಶ್ ಹುಕ್ಕೇರಿ, ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು. ಮಾಜಿ ಸಚಿವ ರಮಾನಾಥ ರೈ, ಅಭಯಚಂದ್ರ ಜೈನ್, ಐವನ್ ಡಿ ಸೋಜ, ಜಿ.ಎ.ಬಾವ, ವಿವಿಧ ಬಂಟ ಸಂಘಟನೆಗಳ ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಕೆ.ಪ್ರಕಾಶ್ ಶೆಟ್ಟಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಡಾ.ಪಿ.ವಿ.ಶೆಟ್ಟಿ, ಬಾರಕೂರು ಮಹಾ ಸಂಸ್ಥಾನದ ವಿಶ್ವ ಸಂತೋಷ್ ಭಾರತಿ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top