ಪುತ್ತೂರು: ಅಕ್ಷರ ದಾಸೋಹ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅ.30 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಯಲಿದ್ದು, ದ.ಕ.ಜಿಲ್ಲೆಯ ಅಕ್ಷರದಾಸೋಹ ನೌಕರರು ನ.7 ರಂದು ಅಡುಗೆ ಕೆಲಸ ಸ್ಥಗಿತಗೊಳಿಸಿ ಬೆಂಗಳೂರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿ, ಬೇಡಿಕೆ ಈಡೇರುವ ತನಕ ನಮ್ಮ ಹೋರಾಟ ನಡೆಯಲಿದೆ. ಈಗಾಗಲೇ ಮುಖ್ಯ ಅಡುಗೆಯವರ ವೇತನ ಗರಿಷ್ಠ 3700 ಇದ್ದು, ಸಹಾಯಕಿಯರ ವೇತನ 3600 ಇದೆ. ಇದನ್ನು ಕನಿಷ್ಠ 10 ರಿಂದ 15 ಸಾವಿರದ ವರೆಗೆ ಏರಿಸಿ ಭದ್ರತೆ ಒಸಗಿಸಬೇಕು. 2022 ರಲ್ಲಿ ಕೆಲಸದಿಂದ ವಜಾಗೊಂಡಿದ್ದ ಎಲ್ಲರಿಗೂ ತಲಾ ಒಂದು ಲಕ್ಷ ಪರಿಹಾರ ನೀಡಬೇಕು. ಕಳೆದ ಏಪ್ರಿಲ್ ನ ಬಜೆಟ್ ನಲ್ಲಿ ಒಂದು ಸಾವಿರ ಏರಿಕೆ ಮಾಡಿದ್ದನ್ನು 2023 ಕ್ಕೆ ಅನ್ವಯಿಸಿ ಜಾರಿ ಮಾಡಬೇಕು, ನಮಗೆ ನೀಡಿದ ಗ್ಯಾರಂಟಿ ವೇತನವನ್ನು ತಕ್ಷಣ ಜಾರಿ ಮಾಡಬೇಕು, ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ 25 ಲಕ್ಷ ಪರಿಹಾರ ನೀಡಬೇಕು, ಮಕ್ಕಳ ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ನಿಲ್ಲಿಸಬೇಕು, ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗೆ ವಹಿಸಬಾರದು ಸೇರಿದಂತೆ ಮುಂತಾದ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ಹೋರಾಟ ನಡೆಯಲಿದೆ. ನ.10ರ ಒಳಗೆ ನಮ್ಮ ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಬಿಸಿಯೂಟ ಬಂದ್ ಮಾಡಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಕೇಂದ್ರ ಸರಕಾರ ಆಡಳಿತಕ್ಕೆ ಬಂದ ನಂತರ ನಯಾಪೈಸೆ ಸಂಬಳ ಏರಿಕೆ ಮಾಡದಿರುವುದು ಖಂಡನೀಯ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಮುಖಂಡ ಪಿ.ಕೆ.ಸತೀಶನ್, ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಸಮಿತಿ ಅಧ್ಯಕ್ಷೆ ಸುಧಾ, ಕಾರ್ಯದರ್ಶಿ ರಂಜಿತ, ಖಜಾಂಚಿ ಶ್ವೇತ, ಲಕ್ಷ್ಮೀ, ತೆರೆಸಾ ಉಪಸ್ಥಿತರಿದ್ದರು.