ವಾರಂಟ್ ಜಾರಿಯಾದ ಬಳಿಕ ನಾಪತ್ತೆ
ಹೊಸದಿಲ್ಲಿ : ನ್ಯೂಯಾರ್ಕ್- ದೆಹಲಿ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ ಮುಂಬೈ ಮೂಲದ ಶಂಕರ್ ಮಿಶ್ರಾ ಎಂಬ ಉದ್ಯಮಿ ಎಂದು ಬೆಳಕಿಗೆ ಬಂದಿದೆ. ದಿಲ್ಲಿ ಪೊಲೀಸರು ಗುರುವಾರ ಮುಂಬಯಿಯ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಈ ವೇಳೆ ಎಲ್ಲೂ ಮಿಶ್ರಾ ಪತ್ತೆಯಾಗಿಲ್ಲ. ಹೀಗಾಗಿ ಆತ ಬೇರೆ ರಾಜ್ಯಕ್ಕೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶಂಕರ್ ಮಿಶ್ರಾ ವಿರುದ್ಧ ಪೊಲೀಸರು ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವರ್ತನೆಯ ಕೇಸು ದಾಖಲಿಸಿಕೊಂಡಿದ್ದಾರೆ.
ಡಿಜಿಸಿಎ ಇಡೀ ಘಟನೆ ಕುರಿತು ಏರ್ ಇಂಡಿಯಾದಿಂದ ವರದಿ ಕೋರಿ ಒಂದು ವೇಳೆ ಘಟನೆಯಲ್ಲಿ ವಿಮಾನದ ಸಿಬ್ಬಂದಿ ಲೋಪ ಎಸಗಿದ್ದರೆ ಅವರ ವಿರುದ್ಧ ಕ್ರಮದ ಭರವಸೆ ನೀಡಿದೆ. ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡುವಂತೆ ಏರ್ ಇಂಡಿಯಾದ ಮುಖ್ಯಸ್ಥ ಎನ್.ಚಂದ್ರಶೇಖರನ್ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಪತ್ರ ಬರೆದಿದೆ.
ನ್ಯೂಯಾರ್ಕ್- ದೆಹಲಿ ನಡುವಿನ ವಿಮಾನದಲ್ಲಿ ಡಿ.26ರಂದು ಮಹಿಳೆ ಮೇಲೆ ಪ್ರಯಾಣಿಕನೊಬ್ಬ ಮೂತ್ರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳದ ಏರ್ ಇಂಡಿಯಾಗೆ ಕೇಂದ್ರ ಸರ್ಕಾರದ ವಿಮಾನಯಾನ ನಿಯಂತ್ರಕರು (ಡಿಜಿಸಿಎ) ತಪರಾಕಿ ಹಾಕಿದ್ದಾರೆ. ಏರ್‌ಲೈನ್‌ನ ನಡವಳಿಕೆಯು ವೃತ್ತಿಪರವಲ್ಲದ ಮತ್ತು ವ್ಯವಸ್ಥಿತ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಕಿಡಿಕಾರಿದೆ. ಈ ಹಿನ್ನೆಲೆಯಲ್ಲಿ ಟಾಟಾ ಗ್ರೂಪ್ ಒಡೆತನದ ಏರ್‌ಲೈನ್‌ನ ಕೆಲವು ಅಧಿಕಾರಿಗಳು, ವಿಮಾನದ ಪೈಲಟ್ ಮತ್ತು ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳಲ್ಲಿ ಉತ್ತರಿಸುವಂತೆ ಕೇಳಿದೆ.
ಈ ನಡುವೆ ಸ್ಪಷ್ಟನೆ ನೀಡಿರುವ ಏರ್ ಇಂಡಿಯಾ, ಪ್ರಕರಣವನ್ನು ಮುಂಬಯಿ ಮೂಲದ ಉದ್ಯಮಿ ಮತ್ತು ಸಂತ್ರಸ್ತ ಮಹಿಳೆ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಡಿಜಿಸಿಎಗೆ ಸ್ಪಷ್ಟನೆ ನೀಡಿದೆ. ಜ.4ರಂದು ಡಿಜಿಸಿಎ ನೀಡಿದ್ದ ನೋಟಿಸ್‌ಗೆ ಉತ್ತರಿಸಿರುವ ಏರಿಂಡಿಯಾ ಮೊದಲು ಸಂತ್ರಸ್ತ ಮಹಿಳೆ ಆರೋಪಿ ವಿರುದ್ಧ ಕಾನೂನು ಕ್ರಮಕ್ಕೆ ಕೋರಿದ್ದರು. ಆದರೆ ಬಳಿಕ ಇಬ್ಬರೂ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡರು. ಹೀಗಾಗಿ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಲು ಏರ್ ಇಂಡಿಯಾ ಮುಂದಾಗಲಿಲ್ಲ. ಇದೇ ಕಾರಣಕ್ಕಾಗಿ ಆರೋಪಿ ವ್ಯಕ್ತಿಯನ್ನು ನಿಲ್ದಾಣದಿಂದ ಕಳುಹಿಸಿಕೊಡಲಾಗಿತ್ತು ಎಂದಿದೆ.