ಪುತ್ತೂರು: ಅ.28 ಹಾಗೂ 29 ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಸಮಾಲೋಚನಾ ಸಭೆ ಶನಿವಾರ ಸಂಜೆ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.
ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ವಿಶ್ವ ಬಂಟರ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಲಿ ಎಂದು ಶುಭಹಾರೈಸಿದರು.
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಪುತ್ತೂರಿನಿಂದ ವಿಶ್ವ ಬಂಟರ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಟ ಬಾಂಧವರು ಭಾಗವಹಿಸುವಂತೆ ವಿನಂತಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ವಿಶ್ವ ಬಂಟರ ಮೇಳವು ವಿಶ್ವಕ್ಕೆ ಮಾದರಿಯಾಗಲಿ. ಕಾರ್ಯಕ್ರಮ ಬಂಟ ಸಮಾಜದ ಐಕ್ಯತೆಯ ಸಂಕೇತವಾಗಿ ಮೂಡಿ ಬರಲಿ ಎಂದರು.
ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಐಕಳ ಹರೀಶ್ ಶೆಟ್ಟಿ ಅವರು ಬಂಟ ಸಮಾಜದ ಅಭಿವೃದ್ಧಿಗೆ ಈಗಾಗಲೇ 30 ಕೋಟಿ ರೂ. ನೆರವು ನೀಡಿ ಸಮಾಜದ ಗೌರವ ಪಡೆದುಕೊಂಡಿದ್ದಾರೆ ಎಂದರು.
ವಿಶ್ವ ಬಂಟರ ಸಮ್ಮೇಳನದ ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ಮಲ್ಲಿಕಾ ಪ್ರಸಾದ್, ಶಕುಂತಳಾ ಟಿ. ಶೆಟ್ಟಿ, ಉದ್ಯಮಿ ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ತಾಲೂಕು ಬಂಟರ ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಉಪಸ್ಥಿತರಿದ್ದರು.
ರಮೇಶ್ ರೈ ಡಿಂಬ್ರಿ, ಎ.ಕೆ.ಜಯರಾಮ ರೈ ಅತಿಥಿಗಳನ್ನು ಗೌರವಿಸಿದರು. ಮಲ್ಲಿಕಾ ಜೆ.ರೈ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.