ಪುತ್ತೂರು: ಹೊಸ ಯೋಚನೆ, ಗುಣಮಟ್ಟ, ರುಚಿಯ ಜತೆಗೆ ಪರಿವರ್ತನೆ… ಇವು ಆಹಾರ ಉದ್ಯಮದ ಯಶಸ್ಸಿನ ದಾರಿ ಎಂದು ಉದ್ಯಮಿ, ಬಿಂದು ಸಮೂಹ ಸಂಸ್ಥೆಯ ಸತ್ಯಶಂಕರ್ ಭಟ್ ಹೇಳಿದರು.
ಪುತ್ತೂರು ವಿಜಯ ಸಾಮ್ರಾಟ್ ಆಶ್ರಯದಲ್ಲಿ ಪಿಲಿಗೊಬ್ಬು ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಆಯೋಜಿಸಿರುವ ‘ಫುಡ್ ಫೆಸ್ಟ್’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಇದ್ದಷ್ಟು ಆಹಾರ ವೈವಿಧ್ಯತೆಗಳು ಜಗತ್ತಿನ ಬೇರೆ ಯಾವ ದೇಶದಲ್ಲೂ ಇಲ್ಲ. ಈ ನಿಟ್ಟಿನಲ್ಲಿ ಭಾರತದಲ್ಲಿ ಆಹಾರ ಉದ್ಯಮಕ್ಕೆ ಹೆಚ್ಚಿನ ಅವಕಾಶವಿದೆ. ಇದೀಗ ಪುತ್ತೂರಿನಲ್ಲಿ ಉದ್ಘಾಟನೆಗೊಂಡಿರುವ ಫುಡ್ ಫೆಸ್ಟ್ ಹೊಸ ಯೋಚನೆಯನ್ನಿಟ್ಟು ಮಾಡಲಾಗಿದೆ ಎಂದ ಅವರು, ಫುಡ್ ಫೆಸ್ಟ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಬಂಟ್ವಾಳ ರಂಗೋಲಿ ಹೊಟೇಲ್ ಮಾಲಿಕ ಚಂದ್ರಹಾಸ ಶೆಟ್ಟಿ, ಪುತ್ತೂರು ಜೆಸಿಐ ಅಧ್ಯಕ್ಷ ಸುಹಾಸ್ ಶುಭ ಹಾರೈಸಿದರು. ಪಿಲಿಗೊಬ್ಬು ಸಮಿತಿ ಗೌರವಾಧ್ಯಕ್ಷ ಸಹಜ್ ರೈ, ಸಂಚಾಲಕ ನಾಗರಾಜ್ ನಡುವಡ್ಕ, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್, ಕಾರ್ಯದರ್ಶಿ ಶರತ್ ಕುಮಾರ್ ಮಾಡಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಸ್ವಾಗತಿಸಿದರು. ನವ್ಯ ಕಾರ್ಯಕ್ರಮ ನಿರೂಪಿಸಿದರು.