ಬೆಳ್ತಂಗಡಿ : ತಾಲೂಕಿನ ಗುರುವಾಯನಕೆರೆ ಜಂಕ್ಷನ್’ನಿಂದ ಉಪ್ಪಿನಂಗಡಿಯ ಕಡೆಗೆ ಕವಲೊಡೆಯುವ ರಸ್ತೆ ಮಾರ್ಗದಲ್ಲಿ ಸುಮಾರು 1.8 ಕಿ. ಮೀ. ದೂರ ಕ್ರಮಿಸಿದಾಗ ಸಿಗುವ ಪುಟ್ಟ ಊರು ಪಣೆಜಾಲು. ಅಲ್ಲಿನ ಮುಖ್ಯ ರಸ್ತೆಯ ಪಕ್ಕದಲ್ಲಿ ಹಾದು ಹೋಗುತ್ತಿರುವ ಹೈ ವೋಲ್ಟೇಜ್ ವಿದ್ಯುತ್ ಪ್ರಸರಣ ಮಾರ್ಗದ ಐದಾರು ಭಾರೀ ಗಾತ್ರದ ತಂತಿಗಳನ್ನು ಹೊತ್ತು ನಿಂತಿದೆ ಒಂದು ಅಲಕ್ಷಿತ ಬಡಪಾಯಿ ವಿದ್ಯುತ್ ಕಂಬ.
ಹಸಿರುವಾದ ಹೆಚ್ಚುತ್ತಿರುವ ಈ ದಿನಮಾನಗಳಿಗೆ ಪೂರಕವೋ ಎಂಬಂತೆ ಮೈತುಂಬಾ ಹಸಿರು ಬಳ್ಳಿಗಳಿಂದ ಆಚ್ಛಾದಿತವಾಗಿ ನಿಂತಿದೆ ಒಂದು ಸೊರಗಿದ ವಿದ್ಯುತ್ ಕಂಬ. ಅಲ್ಲಿಂದ ಸುಮಾರು 700 ಮೀ. ಮುಂದೆ ಸಾಗಿದಾಗ ಎದುರಾಗುತ್ತದೆ ಗೇರುಕಟ್ಟೆ ಪರಿಸರದ ಊರು ಕೆಮ್ಮತ್ತಾರ್. ಅಲ್ಲಿನ ಲೋಬೋ ಇಂಡಸ್ಟ್ರೀಸ್ ಬಳಿ ಅಂತಹುದೇ ಮತ್ತೊಂದು ಬಡಪಾಯಿ ವಿದ್ಯುತ್ ಕಂಬ ಪಣೆಜಾಲಿನ ಕಂಬಕ್ಕಿಂತಲೂ ಶೋಚನೀಯ ಸ್ಥಿತಿಯಲ್ಲಿ ಸಹಾಯ ಹಸ್ತ ಚಾಚಿ ನಮ್ಮನ್ನೇ ನೋಡುತ್ತಿದೆ. ಈ ಮಾರ್ಗದಲ್ಲಿ ಇಂತಹ ಅನೇಕ ಮೃತ್ಯುಸ್ವರೂಪಿ ಕಂಬಗಳ ಸಾಲು ನಿಂತಿವೆ! ಈ ವಿದ್ಯುತ್ ಪ್ರಸರಣ ಮಾರ್ಗ ಸಕ್ರಿಯವಾಗಿ ವಿದ್ಯುತ್ ಸರಬರಾಜು ಮಾಡುತ್ತಿದೆ ಎಂದು ಆತಂಕದಿಂದಲೇ ಹೇಳುತ್ತಾರೆ ನಿವೃತ್ತ ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ.
ಪ್ರಖರ ವಿದ್ಯುತ್ ಪ್ರವಾಹವನ್ನು ಸಾಗಿಸುತ್ತಿರುವ ಈ ಕಂಬಗಳ ಬುಡದಲ್ಲಿ ಚಲಿಸುವ ಜನ – ಜಾನುವಾರುಗಳಿಗೆ ವಿದ್ಯುತ್ ಪ್ರವಹಿಸಿ ಅವಘಢವಾದರೆ ಯಾರು ಹೊಣೆ? ಹೊಣೆ ಹೊತ್ತುಕೊಳ್ಳುವವರು ಸಿಕ್ಕಿದರೂ ಹಾರಿ ಹೋದ ಪ್ರಾಣವನ್ನು ಮತ್ತೆ ತರಲಾದೀತೆ? ನಮ್ಮ ಆಡಳಿತಕ್ಕೆ ಏಕೆ ಇಂತಹ ಬೇಜವಾಬ್ದಾರಿ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.