ಬೆಂಗಳೂರು: ಗುತ್ತಿಗೆದಾರರ ಮನೆಯಲ್ಲಿ ಸಿಕ್ಕಿದ 42 ಕೋಟಿ ರೂ. ಹಣದ ಪರದೇ ಕೆ ಪೀಛೇ ಇರುವ ಕೈಗಳನ್ನು ಪತ್ತೆ ಹಚ್ಚಲು ಸಿಬಿಐ ತನಿಖೆ ಅಗತ್ಯ. ಈ ನಿಟ್ಟಿನಲ್ಲಿ ಸಿಬಿಐ ಸ್ವಯಂಪ್ರೇರಿತ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಆಗ್ರಹಿಸಿದರು.
ಬಿಜೆಪಿ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಭ್ರಷ್ಟಾಚಾರ, ಲೂಟಿ ಕಾಂಗ್ರೆಸಿನ ರಕ್ತದಲ್ಲಿದೆ. ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ. ಅಂಬಿಕಾಪತಿಗೆ 42 ಕೋಟಿ ರೂ. ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರು, ಈ ಪ್ರಕರಣವನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಮುಂದಾಗಿದ್ದಾರೆ. ಆದ್ದರಿಂದ ಕಾಂಗ್ರೆಸ್ ಮುಖವಾಡ ಕಳಚುವ ಕೆಲಸ ಆಗಬೇಕು. ಇಡೀ ದೇಶಕ್ಕೆ ಒಂದು ಸಂದೇಶ ಕೊಡುವ ಕೆಲಸ ಆಗಲಿ. ಸರಕಾರ 650 ಕೋಟಿ ರೂ. ಕೊಟ್ಟದ್ದಕ್ಕೆ ಪ್ರತಿಯಾಗಿ ಕಮಿಷನ್ ರೂಪದಲ್ಲಿ ಗುತ್ತಿಗೆದಾರರು ಹಣ ನೀಡಿದ್ದಾರೆ. ಇದರಲ್ಲಿ ಒಂದಷ್ಟು ಮೊತ್ತ ಈಗಾಗಲೇ ಬೇರೆ ಬೇರೆ ರಾಜ್ಯಗಳಿಗೆ ಕಳಿಸಿದ್ದಾರೆ ಎಂದು ಆರೋಪಿಸಿದರು.
ನಮ್ಮ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ಅತ್ಯಂತ ನೋವಿನ ಸ್ಥಿತಿಯಲ್ಲಿರುವ ರಾಜ್ಯದ ಜನರ ಪರವಾಗಿ ಬಿಜೆಪಿ ನಿಲ್ಲಲಿದೆ. ಮಹಿಳೆಯರಿಗೆ ನೀಡುವ 2 ಸಾವಿರ ರೂಪಾಯಿ ಹಣ ರಾಜ್ಯದ ಅರ್ಧದಷ್ಟು ಜನರಿಗೆ ಸಿಕ್ಕಿಲ್ಲ. ಹಣ ಸಿಕ್ಕಿದ ವಿಷಯವೂ ತನಿಖೆಗೆ ಯೋಗ್ಯವಾಗಿದೆ. ಅದು ಇವರ ಜೇಬಿಗೆ ಹೋಗಿರುವ ಸಾಧ್ಯತೆ ಇದೆ. ಹಣ ಲೂಟಿ ಹೊಡೆಯಲೆಂದೇ 5 ಗ್ಯಾರೆಂಟಿಗಳನ್ನು ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಕ್ತ ಭಾರತ ಮಾಡುವ ಸಂಕಲ್ಪದಲ್ಲಿ ಒಂದಷ್ಟು ಹಂತವನ್ನು ನಾವು ತಲುಪಿದ್ದೇವೆ. ಆಸೆ, ಆಮಿಷ ತೋರಿಸಿ ಜನ ಹಾದಿ ತಪ್ಪಿಸಿ ಚುನಾವಣೆಯಲ್ಲಿ ಅಧಿಕಾರ ಪಡೆದ ಕಾಂಗ್ರೆಸ್ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ಇದರಿಂದಾಗಿ ರಾಜ್ಯದ ಪರಿಸ್ಥಿತಿ ಅಧೋಗತಿಗೆ ಬಂದಿದೆ. ದೇಶದೆಲ್ಲೆಡೆ ಜನರು ಕರ್ನಾಟಕದ ಬಗ್ಗೆ ನಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶ ಅಶ್ವತ್ಥನಾರಾಯಣ್, ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ, ಮುಖಂಡರಾದ ನೆ.ಲ. ನರೇಂದ್ರ ಬಾಬು, ಭಾಸ್ಕರ ರಾವ್, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ನಗರ ಜಿಲ್ಲಾ ಅಧ್ಯಕ್ಷ ಮಂಜುನಾಥ ಜಿ., ನಾರಾಯಣ ಗೌಡ, ಪಕ್ಷ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.