ಪುತ್ತೂರು: ವಿಜಯ ಸಾಮ್ರಾಟ್ ನೇತೃತ್ವದಲ್ಲಿ ಪುತ್ತೂರುದ ಪಿಲಿಗೊಬ್ಬು 2023 ಹಾಗೂ ಫುಡ್ ಫೆಸ್ಟ್ ಅಕ್ಟೋಬರ್ 22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಆಯೋಜಿಸಲಾಗಿದೆ ಎಂದು ಪುತ್ತೂರು ಪಿಲಿಗೊಬ್ಬು ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ನಾಡಿನ ಧಾರ್ಮಿಕ ಹಿನ್ನೆಲೆ ಇರುವ ಜಾನಪದ ಕಲೆ. ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪುತ್ತೂರುದ ಪಿಲಿಗೊಬ್ಬು ಹಾಗೂ ಫುಡ್ ಫೆಸ್ಟ್ ಅಥವಾ ಹುಲಿ ವೇಷ ಕುಣಿತ ಸ್ಪರ್ಧೆ ಹಾಗೂ ಅಹಾರ ಮೇಳ, ಹುಲಿವೇಷ ಕುಣಿತ ಹಮ್ಮಿಕೊಂಡಿದ್ದೇವೆ. ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಪಿಲಿಗೊಬ್ಬು ವೇದಿಕೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ನೆರವೇರಿಸಲಿರುವರು. ಪುತ್ತೂರಿನ ಹಿರಿಯ ವೈದ್ಯ ಡಾ. ಪ್ರಸಾದ್ ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಯ್ದ 10 ಹುಲಿವೇಷ ತಂಡಗಳನ್ನು ಆಹ್ವಾನಿಸಿ ಅವರೊಳಗೆ ಉತ್ತಮ ನಿರ್ವಹಣೆ ಮಾಡಿದ ತಂಡಕ್ಕೆ ಪ್ರಥಮ ಬಹುಮಾನ ರೂ. 3 ಲಕ್ಷ, ದ್ವಿತೀಯ ಬಹುಮಾನ 2 ಲಕ್ಷ ರೂ., ತೃತೀಯ ಬಹುಮಾನ 1 ಲಕ್ಷ ರೂ. ಹಾಗೂ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಗುವುದು. ಮಾತ್ರವಲ್ಲದೆ ಭಾಗಿಯಾದ ತಂಡಗಳಿಗೂ ಗೌರವ ಸಂಭಾವನೆಯನ್ನು ನೀಡಲಾಗುವುದು. ಜೊತೆಗೆ ಸಮಗ್ರ ತಂಡ ಪ್ರಶಸ್ತಿ, ಸಮಗ್ರ ಶಿಸ್ತಿನ ತಂಡ, ಗುಂಪು ಪ್ರಶಸ್ತಿ ವಿಭಾಗದಲ್ಲಿ ಉತ್ತಮ ತಾಸೆ, ಉತ್ತಮ ಬಣ್ಣ, ಉತ್ತಮ ಧರಣಿ ಮಂಡಲ ಕುಣಿತ, ವೈಯುಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಕಪ್ಪು ಹುಲಿ, ಮರಿ ಹುಲಿ, ಪುತ್ತೂರುದ ಹುಲಿ, ಮುಡಿ ಹಾರಿಸುವುದು, ನಾಣ್ಯ ತೆಗೆಯುವುದಕ್ಕೆ ವಿಶೇಷ ಬಹುಮಾನವಿದೆ. ಪ್ರತಿ ತಂಡದಲ್ಲಿ 15 ಹುಲಿವೇಷ ಹಾಗೂ ಪ್ರತಿ ತಂಡಕ್ಕೆ ಹುಲಿ ವೇಷ ಕುಣಿತದ ಕಲಾ ಪ್ರದರ್ಶನ ನೀಡಲು 23 ನಿಮಿಷದ ಕಾಲಾವಕಾಶವಿರುತ್ತದೆ. ಈ ಕ್ಷೇತ್ರದಲ್ಲಿ ಉತ್ತಮ ಪರಿಣತಿ ಹೊಂದಿದ ಜಿಲ್ಲೆಯ ನಾಲ್ವರು ಖ್ಯಾತ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕನ್ನಡ ಸಿನಿಮಾ ರಂಗದ ನಟ. ನಿರ್ದೇಶಕ ರಾಜ್ ಬಿ. ಶೆಟ್ಟಿ, ನಟ ದಿಗಂತ್ ಸೇರಿದಂತೆ ತುಳುನಾಡಿನ ಹೆಸರಾಂತ ಕೋಸ್ಟಲ್ ವುಡ್ ನಟ ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.
21, 22ರಂದು ಫುಡ್ ಫೆಸ್ಟ್:
ಫುಡ್ ಫೆಸ್ಟ್ ಬಗ್ಗೆ ವಿವರಿಸಿದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪುತ್ತೂರು ಪುಡ್ ಫೆಸ್ಟ್, ಅಕ್ಟೋಬರ್ 21ರಂದು ಸಂಜೆ 4ಕ್ಕೆ ಉದ್ಘಾಟನೆಗೊಳ್ಳಲಿದ್ದು, ಶಂಕರ್ ಗ್ರೂಪ್ ಸಂಸ್ಥೆಯ ಆಡಳಿತ ನಿರ್ದೇಶಕ ಸತ್ಯಶಂಕರ್ ಭಟ್ ಉದ್ಘಾಟಿಸುವರು. ಆಹಾರ ಮೇಳವು ಅಕ್ಟೋಬರ್ 21ರ ರಾತ್ರಿ 11 ರ ತನಕ ಹಾಗೂ 22ರಂದು ಬೆಳಗ್ಗೆ 10ರಿಂದ ರಾತ್ರಿ 11ರವರೆಗೆ ನಡೆಯಲಿದೆ ಎಂದರು.
ಜರ್ಮನ್ ಟೆಂಟ್ ಮಾದರಿಯ ಪಗೋಡ ಶಾಮಿಯಾನದಲ್ಲಿ ಫುಡ್ ಫೆಸ್ಟ್ ನಡೆಯಲಿದ್ದು, 40ಕ್ಕೂ ವಿವಿಧ ಮಳಿಗೆಗಳು ಪಾಳ್ಗೊಳ್ಳಲಿವೆ. ಬರ್ಗರ್, ಸ್ಯಾಂಡ್ ವಿಚ್ ಸೇರಿದಂತೆ, ವಿವಿಧ ಬಗೆಯ ಐಸ್ ಕ್ರೀಮ್, ಮೊಕ್ ಟೈಲ್ ಜ್ಯೂಸ್, ಮಟ್ಕಾ ಸೋಡಾ, ಕರಾವಳಿಯ ರುಚಿಕರ ಖಾದ್ಯಗಳ ಸಹಿತ ನಲವತ್ತಕ್ಕೂ ಅಧಿಕ ವಿವಿಧ ಮಳಿಗೆಗಳು ವಿಜೃಂಭಿಸಲಿವೆ ಎಂದು ವಿವರಿಸಿದರು.
ವಿಶೇಷ ಆಕರ್ಷಣೆ ಯಾಗಿ ಸೆಲ್ಫಿ ಕಾರ್ನರ್ ಇರಲಿದೆ. ಇದು ತುಳುನಾಡಿನ ನಾಡಿಮಿಡಿತ ಹಾಗೂ ದೈವಿಕ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ನಾಗರಾಜ ನಡುವಡ್ಕ, ಸುಜಿತ್ ರೈ ಪಾಳ್ತಾಡ್, ಶರತ್ ಅಳ್ವಾ ಕೋರಲು ಉಪಸ್ಥಿತರಿದ್ದರು.