ಪುತ್ತೂರು: ಕಾನೂನಿನ ಹಿಂದೆ ನಾವು ಹೋಗುವುದಲ್ಲ. ಕಾನೂನು ತೊಡಕು ಪರಿಹರಿಸಿಕೊಂಡು ಜನರ ಕೆಲಸ ಮಾಡಿಕೊಡಬೇಕು. ಸರಿಯಾದ ಮತ್ತು ಪ್ರಾಮಾಣಿಕ ಸೇವೆ ನೀಡುವುದು ಜನಪ್ರತಿನಿಧಿಗಳು ಮತ್ತು ಪಂಚಾಯಿತಿ ಸಿಬ್ಬಂದಿಗಳ ಕರ್ತವ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಆರ್ಯಾಪು ಗ್ರಾ.ಪಂ. ಅಮೃತ ಉದ್ಯಾನವನ ಹಾಗೂ ತಾಲೂಕಿನ ಏಕೈಕ ಬೀಕೊನ್ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಹಳ್ಳಿಯ ಜನರೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಮತ್ತು ವಿದ್ಯುತ್‌ನಿಂದ ವಂಚಿತರಾಗಬಾರದು. ಇದಕ್ಕಾಗಿ ನಾನು ಹೋರಾಟ ಮಾಡಲೂ ಸಿದ್ಧನಿದ್ದೇನೆ. ಈ ಹೋರಾಟಗಳಿಗೆ ನಾನೇ ರೂವಾರಿಯಾಗಲಿದ್ದೇನೆ ಎಂದು ಅಶೋಕ್ ರೈ ಹೇಳಿದರು.
ಗ್ರಂಥಾಲಯವು ವಿಶೇಷ ಚೇತನರಿಗಾಗಿ ಇರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಪುತ್ತೂರು ತಾಲೂಕಿನ ಪ್ರಥಮ ಗ್ರಂಥಾಲಯವಾಗಿದೆ. ಅಲ್ಲದೇ ಈ ಗ್ರಂಥಾಲಯದೊಳಗೆ ಸಾರ್ವಜನಿಕರಿಗೆ ವಿವಿಧ ಇಲಾಖೆಗಳ ಮಾಹಿತಿ ಒದಗಿಸಬಲ್ಲ ಸಾರ್ವಜನಿಕ ಮಾಹಿತಿ ಪರದೆ ‘ಡಿಜಿಟಲ್ ಇನ್‌ಫಾರ್ಮೆಶನ್ ಡಿಸ್‌ಪ್ಲೇ’ ಯಂತ್ರವನ್ನೂ ಅಳವಡಿಸಲಾಗಿದೆ. ಇದು ಜಿಲ್ಲೆಯಲ್ಲೇ ಪ್ರಥಮ ಎಂದರು.
ಉದ್ಯಾನವನದ ಮೂಲಕ ಪರಿಸರಕ್ಕೆ ಪ್ರಯೋಜನ ಕೊಡುವ ಕೆಲಸವಾಗಬೇಕು. ಪ್ರಾಣಿ ಪಕ್ಷಿಗಳಿಗೆ ತಿನ್ನುವುದಕ್ಕಾದರೂ ಜಾಗ ಸಿಕ್ಕಲ್ಲಿ ಒಂದಷ್ಟು ಹಣ್ಣಿನ ಗಿಡಗಳನ್ನು ನೆಡಬೇಕು. ಆ ದಿಶೆಯಲ್ಲಿ ಆರ್ಯಾವು ಪಂಚಾಯಿತಿ ಒಂದು ಹೆಜ್ಜೆ ಮುಂದಿದೆ ಎಂದು ಶಾಸಕರು ಪ್ರಶಂಸೆ ವ್ಯಕ್ತಪಡಿಸಿದರು.
ಪಂಚಾಯಿತಿ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿ, ಮೂಲಸೌಕರ್ಯಕ್ಕಾಗಿ ಹೆಚ್ಚಿನ ಅನುದಾನ ಒದಗಿಸಲು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸೇರಿದಂತೆ ಹಲವು ರೀತಿಯ ಅನುದಾನಕ್ಕಾಗಿ ಶಾಸಕರಿಗೆ ಮನವಿ ಸಲ್ಲಿಸಿದರು.
ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಸುಕನ್ಯಾ, ಗ್ರಾ.ಪಂ. ಉಪಾಧ್ಯಕ್ಷ ಅಶೋಕ್ ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಪಿಡಿಒ ನಾಗೇಶ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ಸದಸ್ಯೆ ಪವಿತ್ರ ಎನ್. ವಂದಿಸಿದರು. ಸದಸ್ಯ ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.