ಪುತ್ತೂರು: ಇದುವರೆಗೆ ದಾಖಲಾಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಸಿದ್ಧವಾಗಿದ್ದು, 208272 ಮತದಾರರ ಹೆಸರು ಹಕ್ಕು ಚಲಾಯಿಸುವ ಕಾರ್ಯಕ್ಕೆ ಅಂತಿಮಗೊಂಡಿದೆ. ಇದರಲ್ಲಿ 105363 ಮಂದಿ ಮಹಿಳೆಯರೇ ಎನ್ನುವುದು ವಿಶೇಷ.
ಪುತ್ತೂರು ತಾಲೂಕು ಕಚೇರಿಯ ಲೆಕ್ಕಾಚಾರದಂತೆ, ಇದುವರೆಗೆ 208272 ಮಂದಿ ಮತದಾರರ ಪಟ್ಟಿ ಸಿದ್ಧವಾಗಿದೆ. ಅಂದರೆ ಇದೇ ಅಂತಿಮವಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ, ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಘೋಷಣೆ ಮಾಡುವ ದಿನದವರೆಗೂ ಮತದಾರರ ಪಟ್ಟಿಗೆ ಹೆಸರು ನೀಡಲು ಅವಕಾಶವಿದೆ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾಹಿತಿ ನೀಡಿದರು.
ತಹಸೀಲ್ದಾರ್ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ 3080 ಮಂದಿ ಮತದಾರರ ಹೆಸರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಅದರಂತೆ ಒಟ್ಟು 208272 ಮಂದಿ ಮತದಾರರ ಹೆಸರು ಈಗಿನವರೆಗೆ ಅಂತಿಮಗೊಂಡಿದೆ. ಇದರಲ್ಲಿ 102909 ಪುರುಷ ಹಾಗೂ 105363 ಮಹಿಳಾ ಮತದಾರರು. ವಲಸೆ ಹೋದವರು ಹಾಗೂ ಮೃತಪಟ್ಟವರ ಸಂಖ್ಯೆ ಸೇರಿದಂತೆ ಒಟ್ಟು 1911 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವಿವರಿಸಿದರು.
1998 ವಿಶೇಷ ಚೇತನ ಮತಗಳು:
ಒಟ್ಟು ಮತದಾರರಲ್ಲಿ 1998 ಮಂದಿ ವಿಶೇಷ ಚೇತನ ಮತಗಳು. ಅನಿವಾಸಿ ಭಾರತೀಯರ (ಎನ್.ಆರ್.ಐ) ಮತಗಳು ಪುತ್ತೂರಿನಲ್ಲಿದ್ದು, 24 ಮಂದಿ ಮತ ಚಲಾಯಿಸಲಿದ್ದಾರೆ. ಇನ್ನು ವಿಐಪಿ ಪಟ್ಟಿಯಲ್ಲಿ 657 ಮಂದಿಯ ಹೆಸರು ಇದೆ. ಅಲ್ಲದೇ, ಸೈನ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ 96 ಮಂದಿ ಪುತ್ತೂರಿನಲ್ಲಿ ಮತ ಚಲಾಯಿಸಲಿದ್ದಾರೆ.
ಶೇ. 86.1 ಆಧಾರ್ ಲಿಂಕ್:
ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಪುತ್ತೂರಿನ ಒಟ್ಟು ಮತದಾರರ ಪೈಕಿ ಶೇ. 86.1 ಮಂದಿಯ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿದ್ದಾರೆ. ಅಂದರೆ 176769 ಮಂದಿಯ ಆಧಾರ್ ಕಾರ್ಡ್ ಲಿಂಕ್ ಆಗಿದೆ.