ಪೆರ್ಲಂಪಾಡಿ: ಆಧುನಿಕತೆ ಎಲ್ಲೆಡೆ ವ್ಯಾಪಿಸುತ್ತಿದ್ದಂತೆ, ಪುಟ್ಟ ಪುಟ್ಟ ಹಳ್ಳಿಗಳೂ ಪಟ್ಟಣಗಳಾಗುತ್ತಿವೆ. ಗುಡ್ಡ ಎಂದು ಮೂದಲಿಸುತ್ತಿದ್ದವರೂ ಮೂಗಿನ ಮೇಲೆ ಬೆರಳಿಡುವಷ್ಟು ಬದಲಾವಣೆಗೆ ಒಳಪಡುತ್ತಿವೆ. ಇಂತಹ ದಿನದಲ್ಲಿ, ಇನ್ನೂ ರಸ್ತೆಯಿರದ ಮನೆಗಳಿವೆ ಎಂದರೆ ನೀವು ಆಶ್ಚರ್ಯ ಪಡುತ್ತೀರಿ!
ಕೊಳ್ತಿಗೆ ಗ್ರಾಮದ ದುಗ್ಗಳದ 2 ಮನೆಗಳಿಗೆ ಇನ್ನೂ ರಸ್ತೆ ಭಾಗ್ಯ ಒದಗಿ ಬಂದಿಲ್ಲ. ಇತ್ತೀಚೆಗೆ ಹಿರಿಯ ನಾಗರಿಕರೋರ್ವರು ಅಸ್ವಸ್ಥಗೊಂಡಾಗ ಕುರ್ಚಿಯಲ್ಲಿ ಕುಳ್ಳಿರಿಸಿ ಎತ್ತಿಕೊಂಡು ಹೋದ ನಿದರ್ಶನ ಕಣ್ಣ ಮುಂದಿದೆ. ಶಾಲಾ ವಿದ್ಯಾರ್ಥಿಗಳು ಇದೇ ಕಾಲುದಾರಿಯಿಂದ ಹೋಗಬೇಕಾದ ದುಸ್ಥಿತಿಯಿದೆ. ಕೃಷಿ ಕಾರ್ಯಗಳನ್ನು ನಡೆಸಬೇಕಾದರೆ, ಅಗತ್ಯ ವಸ್ತುಗಳನ್ನು ತಲೆಹೊರೆಯಲ್ಲೇ ಕೊಂಡೊಯ್ಯಬೇಕಾಗಿದೆ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.
ಈಗಾಗಲೇ ಜನಪ್ರತಿನಿಧಿ, ಅಧಿಕಾರಿಗಳ ಬಳಿ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದು, ಶೀಘ್ರ ರಸ್ತೆ ನಿರ್ಮಿಸಿಕೊಡುವ ಭರವಸೆಯಷ್ಟೇ ಸಿಕ್ಕಿದೆ. ಆದರೆ ರಸ್ತೆ ಭಾಗ್ಯ ಇನ್ನೂ ಸಿಕ್ಕಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ದೀಕ್ಷಿತ್.
ಮನೆ, ನೀರು, ವಿದ್ಯುತ್, ರಸ್ತೆ ಇವು ಮೂಲ ಸೌಕರ್ಯಗಳು ಎಂದು ಹೇಳಲಾಗಿದೆ. ಆದರೆ ದುಗ್ಗಳದ ಎರಡು ಮನೆಗಳಿಗೆ ಇನ್ನೂ ರಸ್ತೆ ಸೌಲಭ್ಯ ಇಲ್ಲದೇ ಇರುವುದು ದೊಡ್ಡ ಪ್ರಶ್ನೆಯಾಗಿ ಉಳಿದುಕೊಂಡಿದೆ.