ಕಳವಾದ ದೇವಸ್ಥಾನದ ಆಭರಣದೊಂದಿಗೆ ಶರಣಾದ ಮಾಜಿ ಅಧ್ಯಕ್ಷ!

ಉಪ್ಪಿನಂಗಡಿ: ಡಿಸೆಂಬರ್ ತಿಂಗಳಲ್ಲಿ ನಡೆದ ಬ್ರಹ್ಮಕಲಶೋತ್ಸವ ವೇಳೆ ಪೆರ್ನೆಯ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಮರ್ಪಿಸಲಾದ ಆಭರಣ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಆರೋಪಿ ಆಭರಣದೊಂದಿಗೆ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.

ದೇವಳದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು ನಾಪತ್ತೆಯಾದ ಚಿನ್ನಾಭರಣದೊಂದಿಗೆ ಪೊಲೀಸರಿಗೆ ಶರಣಾದ ವ್ಯಕ್ತಿ.

ಕಳೆದ ಡಿಸೆಂಬರ್’ನಲ್ಲಿ ದೇವಾಲಯದ ಬ್ರಹ್ಮಕಲಶಾಭಿಷೇಕ ನಡೆದಿದ್ದು, ಈ ಸಂದರ್ಭ ಭಕ್ತರೋರ್ವರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಜೋ ಮಾಲೆಯನ್ನು ದೇವರಿಗೆ ಸಮರ್ಪಿಸಿದ್ದರು. ಈ ಹಿಂದೆ ರಾಮದಾಸ್ ರೈ ಎಂಬವರು ಸಮರ್ಪಿಸಿದ ಎರಡು ಪವನಿನ ಚಿನ್ನದ ಸರವೂ ದೇವಾಲಯದಲ್ಲಿತ್ತು. ಆಡಳಿತಾಧಿಕಾರಿಯ ಸಮ್ಮುಖದಲ್ಲಿ ನಡೆದ ಪರಿಶೀಲನೆ ವೇಳೆ ಆಭರಣಗಳು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು.



































 
 

ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಆರೋಪಿ ಚಿನ್ನಾಭರಣದೊಂದಿಗೆ ಶರಣಾಗಿದ್ದಾರೆ.

ತನ್ನ ಅಧ್ಯಕ್ಷೀಯ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು, ದೇವಳದ ಚಿನ್ನಾಭರಣವನ್ನು ಉಪ್ಪಿನಂಗಡಿಯ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಅಡವಿರಿಸಿ ಹಣ ಪಡೆದಿದ್ದರು. ಪ್ರಕರಣ ದಾಖಲಾದ ಬೆನ್ನಿಗೇ ಹಣಕಾಸು ಸಂಸ್ಥೆಯಿಂದ ಚಿನ್ನಾಭರಣವನ್ನು ಬಿಡಿಸಿಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದಡಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ದೇವಾಲಯದಲ್ಲಿ ಮಹಜರು ನಡೆಸಿದ್ದಾರೆ.

ಈ ಮಧ್ಯೆ ದೇವಾಲಯದಲ್ಲಿದ್ದ ಸುಮಾರು 2 ಪವನ್ ತೂಕದ ಚಿನ್ನದ ಸರ ಇನ್ನೂ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ತನಿಖೆ ಮುಂದುವರೆದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top