ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಸಂಘದ ರೈತ ಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿ.ಬಾಬು ಶೆಟ್ಟಿ ಮಾತನಾಡಿ, ಕಳೆದ ಬಾರಿ ಐದು ವಿದ್ಯಾರ್ಥಿಗಳನ್ನು ಅಭಿನಂದಿಸಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಹತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಲಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ 25 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ 625 ಅಂಕಗಳಿಗೆ 623 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ತೃತೀಯ ಸ್ಥಾನಿಯಾದ ತೇಜಸ್ ಎಸ್. ಆರ್. ನಮ್ಮ ಸಂಘದ ಸದಸ್ಯರ ಪುತ್ರ ಎಂಬುದು ಹೆಮ್ಮೆಯ ವಿಷಯ ಎಂದರು.
ಪೋಷಕರ ನೆಲೆಯಲ್ಲಿ ಮಾತನಾಡಿದ ನ್ಯಾಯವಾದಿ ಸುಧೀರ್ ತೋಳ್ಪಾಡಿ, ಒಬ್ಬ ಶ್ರಮಿಕನಿಗೆ ತಮ್ಮ ದುಡಿಮೆಯ ಪ್ರತಿಫಲ ಕೈ ಸೇರಿದಾಗ ಆಗುವ ಸಂತೋಷದಂತೆ ವಿದ್ಯಾರ್ಥಿ ಜೀವನದಲ್ಲಿ ತಾವು ಸಾಧಿಸಿದ ಸಾಧನೆಯನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿದಾಗಲೇ ಆ ವಿದ್ಯಾರ್ಥಿಯ ವಿದ್ಯಾಸಾಧನೆಗೆ ಮತ್ತಷ್ಟು ಸ್ಪೂರ್ತಿ ದೊರೆಯುವುದು. ಬದುಕಿನಲ್ಲಿ ಪ್ರೇರಣೆಯ ಬೆಳಕು ಮೂಡಿಸುವುದು ಉತ್ತಮ ಹಾಗೂ ಶ್ಲಾಘನೀಯ ಕಾರ್ಯ ಎಂದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ವಿ.ಬಾಬುಶೆಟ್ಟಿ, ಉಪಾಧ್ಯಕ್ಷೆ ಲತಾ ಮೋಹನ ಗೌಡ ಪಾದೆ, ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಧುಕರ ಹೆಚ್. ಸ್ವಾಗತಿಸಿದರು. ಸಂಘದ ನಿರ್ದೇಶಕ ಹೊನ್ನಪ್ಪ ಪೂಜಾರಿ ಕೈಂದಾಡಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಕೈಂದಾಡಿ ವಂದಿಸಿದರು.