ಪುತ್ತೂರು: ಪ್ರಸ್ತುತ ರಾಜ್ಯ ಸರಕಾರ ಸುಲಿಗೆಕೋರ ಸರಕಾರವಾಗಿದ್ದು, ಬಿಜೆಪಿ ನಿರಂತರ ಹೋರಾಟ, ಜನಾಂದೋಲನದ ಮೂಲಕ ಜನರನ್ನು ಎಬ್ಬಿಸಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ರಾಜ್ಯ ಸರಕಾರದ ಭ್ರಷ್ಟಾಚಾರ ವಿರೋಧಿಸಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಆಡಳಿತ ಸೌಧದ ಬಳಿ ಇರುವ ಅಮರ್ ಜವಾನ್ ಸ್ಮಾರಕದ ಬಳಿ ಮಂಗಳವಾರ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಒಂದೆಡೆ ಮಳೆ ಇಲ್ಲದೆ ಬರ ಪರಿಸ್ಥಿತಿ ಉಂಟಾಗಿದೆ. ಇನ್ನೊಂದೆಡೆ ಕರ್ನಾಟಕ ಸರಕಾರದ ಸೂಟ್ ಕೇಸ್ ಭರಪೂರ ಭರ್ತಿಯಾಗಿದೆ ಎಂದು ಲೇವಡಿ ಮಾಡಿದ ಅವರು, ರಾಜ್ಯಾದ್ಯಂತ ಜನಸಾಮಾನ್ಯರು ಬೀದಿಗೆ ಇಳಿದು ಹೋರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ. ಈ ಮೂಲಕ ಮುಂದಿನ ನಾಲ್ಕು ವರ್ಷಗಳ ಕಾಂಗ್ರೆಸ್ ಆಡಳಿತ ಹೇಗಿರಬಹುದು ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಸರಕಾರದ ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂದರೆ ಮೈಸೂರು ದಸರಾದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬಂದ ಕಲಾವಿದರಿಂದ ಶೇ. 60 ಕಮಿಷನ್ ಪಡೆಯುವ ಮಟ್ಟಿಗೆ ಬಂದಿದೆ. ಬಿಜೆಪಿ ಸರಕಾರವನ್ನು ಶೇ. 40 ಕಮಿಷನ್ ಸರಕಾರ ಎಂದು ಆರೋಪ ಮಾಡಿರುವ ಪ್ರಸ್ತುತ ಸರಕಾರ, ಸೋನಿಯಾ ಗಾಂಧಿಗೆ ಕಪ್ಪ ಕಾಣಿಕೆ ನೀಡುವ ಸಲುವಾಗಿ ಶೇ. 80 ಕಮಿಷನ್ ಆಗಿದೆ. ಇದಕ್ಕೆ ಕಂಟ್ರಾಕ್ಟ್ ದಾರರ ಮನೆಯಲ್ಲಿ ಸಿಕ್ಕಿರುವ ಕೋಟ್ಯಾಂತರ ರೂಪಾಯಿಗಳು ಸಾಕ್ಷಿ ಎಂದರು.
ಇಂದು ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಪರಿಣಾಮ ರೈತರು ನೆಮ್ಮದಿ ಕಳೆದುಕೊಂಡಿದ್ದಾರೆ. ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡುವ ಹುನ್ನಾರದ ಮೂಲಕ ತಮಿಳುನಾಡಿನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರೈತರು, ರೈತರ ಮಕ್ಕಳಿಗಾಗಿ ಇರುವ ಕೇಂದ್ರ ಸರಕಾರದ ಯೋಜನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಸರಕಾರದ ಬಳಿ ದುಡ್ಡಿಲ್ಲದಿದ್ದರೆ ನಮ್ಮಲ್ಲಿ ತಿಳಿಸಲಿ, ಭಿಕ್ಷೆ ಬೇಡಿಯಾದರೂ ನಾವು ಹಣ ನೀಡುತ್ತೇವೆ ಎಂದು ಖಾರವಾಗಿ ಹೇಳಿದ ಅವರು, ಜನರಿಗೆ ಮಂಕುಬೂದಿ ಎರಚಿ ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧತೆಗಳನ್ನೂ ಮಾಡುತ್ತಿದೆ. ತಕ್ಷಣ ರಾಜ್ಯ ಸರಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡಿ, ಕೇವಲ ಟೇಪು ಕತ್ತರಿಸುವುದು ಮತ್ತು ಭಾಷಣಕ್ಕೆ ಮಾತ್ರ ಕಾಂಗ್ರೆಸ್ ನ ಪ್ರಮುಖರು ಸೀಮಿತವಾಗಿದ್ದಾರೆ. ಮತ್ತೆ ಅನುದಾನ ಎಲ್ಲಿಂದ ತರುವುದು ಎಂದು ಪ್ರಶ್ನಿಸಿದ ಅವರು, ಸರಕಾರದ ದುಷ್ಟ ಬುದ್ಧಿಯನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಬಿಜೆಪಿಯಿಂದ ಆಗಲಿ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ. ಜಗನ್ನಿವಾಸ ರಾವ್, ಅಪ್ಪಯ್ಯ ಮಣಿಯಾಣಿ, ಪುರುಷೋತ್ತಮ ಮುಂಗ್ಲಿಮನೆ, ಆರ್.ಸಿ. ನಾರಾಯಣ್, ಹರಿಪ್ರಸಾದ್ ಯಾದವ್, ನಿತೇಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್. ಶೆಟ್ಟಿ, ವಿದ್ಯಾ ಆರ್. ಗೌರಿ, ಜಿಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿದ ಮನವಿಯನ್ನು ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.