ಪುತ್ತೂರು: ಬಹುತೇಕ ಮಂದಿ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಸಂಭ್ರಮದಿಂದ, ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಾರೆ. ಅದೂ ಮನೆಯ ನಾಲ್ಕು ಗೋಡೆಗಳ ಮಧ್ಯೆ ಅಥವಾ ಸ್ನೇಹಿತರ ಜೊತೆಗೆ. ಇದಕ್ಕೆ ಅಪವಾದ ಎನ್ನುವಂತೆ ಇಲ್ಲೊಬ್ಬರು ತನ್ನ ಮಕ್ಕಳ ಹುಟ್ಟುಹಬ್ಬವನ್ನು ಬಡವರಿಗೆ ನೆರವಾಗುವ ಮೂಲಕ ಆಚರಿಸಿಕೊಳ್ಳುತ್ತಿದ್ದಾರೆ.
ಚಾರ್ವಾಕ ವಾಲ್ತಾಜೆಯ ರಾಜೇಶ್ ವಾಲ್ತಾಜೆ ಅವರೇ ಹೀಗೆ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವವರು. ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಎಲ್ಲೂ ಕಾಣದ ವಿಶೇಷತೆಯಿದೆ.
ಚಾರ್ವಾಕದಲ್ಲಿ ದುರ್ಗಾ ಅರ್ಥ್ ಮೂವರ್ಸ್ ಸಂಸ್ಥೆಯ ಮಾಲಕರಾಗಿರುವ ರಾಜೇಶ್ ಅವರು ತನ್ನ ಹುಟ್ಟುಹಬ್ಬ ಸಹಿತ ತಮ್ಮ ಮಕ್ಕಳ ಹುಟ್ಟುಹಬ್ಬದಂದೂ ಪ್ರತೀ ವರ್ಷ ಬಡವರ ಮನೆಯನ್ನು ಗುರುತಿಸಿ ಆ ಮನೆಯ ಜಾಗದಲ್ಲಿ 250 ಕ್ಕೂ ಮಿಕ್ಕಿ ಅಡಿಕೆ ಗಿಡ ನೆಡಲು ಗುಂಡಿ ತೆಗೆಯುವ ಮೂಲಕ ಬಡವರ ಮನೆಗೆ ಬೆಳಕು ನೀಡುವ ಕೆಲಸ ಮಾಡುತ್ತಿದ್ದಾರೆ.
ಈ ಮೂಲಕ ಬಡವರಿಗೆ ಸ್ವ ಉದ್ಯೋಗದ ದಾರಿ ತೋರಿಸಿಕೊಡುತ್ತಿದ್ದಾರೆ. ತಮ್ಮ ಬಳಿಯಿರುವ ಖಾಲಿ ಜಮೀನಿನಲ್ಲಿ ದುಡಿದು, ತಮ್ಮ ಜೀವನ ನಿರ್ವಹಣೆಯನ್ನು ತಾವೇ ಮಾಡಬಹುದು ಎನ್ನುವ ಉದ್ದೇಶ ರಾಜೇಶ್ ಅವರದ್ದು.
ತಮ್ಮ ಸುತ್ತಮುತ್ತಲಿನ ಜನರು ಸ್ವತಂತ್ರವಾಗಿ ಬದುಕಬೇಕು ಎನ್ನುವ ರಾಜೇಶ್ ಅವರ ಆಲೋಚನೆಯೇ ವಿಭಿನ್ನ. ಅವರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿಯಾಗಿರುವುದು ಖಂಡಿತಾ.