ತುರ್ತುಸಭೆಯಲ್ಲಿ ನಿರ್ಧಾರ
ಮೂಡುಬಿದಿರೆ : ಕಂಬಳ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಬುಧವಾರ ನಡೆದ ತುರ್ತುಸಭೆಯಲ್ಲಿ ನಿರ್ಧರಿಸಲಾಗಿದೆ.
ಮುಂದಿನ ಕಂಬಳಗಳಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಕೊಡುಗೆಯಾಗಿ ನೀಡದ ಸೆನ್ಸಾರ್ ಸಿಸ್ಟಂ ಅಳವಡಿಸಿಕೊಂಡು ಫಲಿತಾಂಶ ನಿರ್ಧರಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸೆನ್ಸಾರ್ ಸಿಸ್ಟಂ ನಿರ್ವಹಣೆಯ ಪೂರ್ಣ ಜವಾಬ್ದಾರಿ ಕಂಗಿನಮನೆ ವಿಜಯಕುಮಾರ್ ಅವರದ್ದು. ಒಂದು ವೇಳೆ ಈ ಸೆನ್ಸಾರ್ ಸಿಸ್ಟಂ ಕಂಬಳ ಆಗುವಾಗ ಕೈಕೊಟ್ಟರೆ ಮೂರನೇ ತೀರ್ಪುಗಾರರ ತೀರ್ಮಾನವನ್ನು ಅವಲಂಬಿಸಲಾಗುವುದು.
ಮೂರನೇ ತೀರ್ಪುಗಾರರಾಗಿ ಜಿಲ್ಲಾ ಕಂಬಳ ಸಮಿತಿ ಮತ್ತು ಆಯಾಯ ಕಂಬಳ ಸಮಿತಿ ನೇಮಿಸಲ್ಪಟ್ಟವರು ಕಾರ್ಯನಿರ್ವಹಿಸಬೇಕು. ಮೂರನೇ ತೀರ್ಪುಗಾರರು ತೀರ್ಪು ನೀಡುವಾಗ ಕೋಣಗಳ ಓಟದ ವೀಡಿಯೊ ದೃಶ್ಯ ನೋಡಲು ಎರಡು ಸ್ಪರ್ಧೆಯಲ್ಲಿ ಭಾಗವಹಿಸಿದ ಎರಡು ಜೋಡಿ ಕೋಣಗಳ ಯಜಮಾನರಿಗೆ ಅಥವಾ ಪ್ರತಿನಿಧಿಗಳಿಗೆ ಅವಕಾಶ ಇದೆ ಎಂಬ ತೀರ್ಮಾನಗಳನ್ನು ಕಂಬಳ ಸಮಿತಿಯ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ತೀರ್ಪುಗಾರರು ಮದ್ಯ ಸೇವಿಸಿಸ ಭಾಗವಹಿಸುವಂತಿಲ್ಲ. ಯಾವುದೇ ಆಶಿಸ್ತು ಅಥವಾ ಪಕ್ಷಪಾತದ ನಿಲುವು ತೋರಿಸಿದರೆ ಮುಂದಿನ ಕಂಬಳಗಳಿಗೆ ಅಮಾನತುಗೊಳಿಸಲಾಗುವುದು. ತೀರ್ಪುಗಾರರು ಮತ್ತು ಉದ್ಘೋಷಕರು ಕಂಬಳಕ್ಕೆ ಸಂಬಂಧಪಡದ ವಿಚಾರಗಳನ್ನು ಪ್ರಸ್ತಾಪಿಸುವುದು ಸಲ್ಲದು. ಓಟಕ್ಕೆ ಕರೆ ಕೊಟ್ಟ ಕೂಡಲೇ ಕೋಣಗಳನ್ನು ಇಳಿಸಬೇಕು. ಕಾರಣವಿಲ್ಲದೆ ವಿಳಂಬ ಮಾಡಿದರೆ ಸಮಿತಿ ನಿಗದಿಪಡಿಸಿದ ಕಾಲಮಿತಿಯಂತೆ ತೀರ್ಪು ನೀಡಲಾಗುವುದು ಎಂದು ನೀರ್ಧರಿಸಲಾಗಿದೆ.