ಜಮಾಅತೆ ಇಸ್ಲಾಮೀ ಹಿಂದ್’ನಿಂದ ವಿಚಾರ ವಿನಿಮಯ

ಪುತ್ತೂರು: ಪ್ರತಿ ವರ್ಷ ಪ್ರವಾದಿ ಮಹಮ್ಮದ್ ಪೈಗಂಬರ್ (ಸ.ಅ.) ಅವರ ಜನ್ಮ ಮಾಸದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಸೀರತ್ ಅಭಿಯಾನ ನಡೆಸಲಾಗುತ್ತಿದ್ದು, ನ. 17ರಂದು ಸಮಾರೋಪ ಸಮಾರಂಭ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಉಪ ಸಂಚಾಲಕ ಅಮೀನ್ ಹಸನ್ ತಿಳಿಸಿದ್ದಾರೆ.

ಅಭಿಯಾನದ ಅಂಗವಾಗಿ ಗುರುವಾರ ಸಂಘಟನೆ ವತಿಯಿಂದ ಪುತ್ತೂರಿನಲ್ಲಿ ಪತ್ರಕರ್ತರ ಜತೆಗಿನ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾನತೆಯ ಸಮಾಜ ಶಿಲ್ಪಿ ಅಭಿಯಾನ’ ಎಂಬ ಹೆಸರಿನಲ್ಲಿ ಅಭಿಯಾನ ನಡೆಯುತ್ತಿದ್ದು, ಪ್ರವಾದಿ ಅವರ ಜೀವನ ಸಂದೇಶವನ್ನು ಜನ ಮಾನಸದಲ್ಲಿ ಬಿತ್ತುವ ಉದ್ದೇಶದಿಂದ ಅಭಿಯಾನ ನಡೆಸಲಾಗುತ್ತಿದೆ. ಇದರ ಜತೆಗೆ ಸಮಗ್ರ ಸಮಾಜದ ಸರ್ವ ಧರ್ಮಗಳ ಜತೆಗೆ ಸಾಮರಸ್ಯದ ಸಂದೇಶವನ್ನು ಮೂಡಿಸಿಕೊಂಡು, ಸರ್ವರೂ ಒಂದಾಗಿ ಸಮಾನತೆಯ ಸಮಾಜ ನಿರ್ಮಾಣದತ್ತ ಚಿಂತನೆ ಮಾಡುವ ಆಶಯ ಇಟ್ಟುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ನ. 17ರಂದು ಸಂಜೆ 6.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರವಾದಿ ಮಹಮ್ಮದ್, ಸ್ವಾಮಿ ವಿವೇಕಾನಂದ, ಬ್ರಹ್ಮಶ್ರೀ ನಾರಾಯಣ ಗುರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮುಂತಾದ ಮಾನವತಾವಾದಿಗಳ ಆದರ್ಶ, ಚಿಂತನೆಗಳ ಬಗ್ಗೆ ಆಯಾ ವರ್ಗದ ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ. ಸುಮಾರು 800 ಮಂದಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.



































 
 

ಜಮಾಅತೇ ಇಸ್ಲಾಮಿ ಹಿಂದ್ ಮುಸ್ಲಿಂ ಸಮಾಜದ ಸಂಘಟನೆಯಾಗಿದೆ. ಇಸ್ಲಾಮ್ನ ನೈಜ ಸಂದೇಶವನ್ನು ಪಾಲಿಸುವುದು, ಅಲ್ಲಾಹನ ಆರಾಧನೆ ಮತ್ತು ಪ್ರವಾದಿ ಅನುಸರಣೆ ಸಂಘಟನೆಯ ಧ್ಯೇಯವಾಗಿದೆ. ಸಂಸ್ಥೆಯ ಅಡಿಯಲ್ಲಿ ಶಾಂತಿ ಪ್ರಕಾಶನ ಪ್ರಕಟಣಾ ಸಂಸ್ಥೆ ಪ್ರವಾದಿ ಜೀವನ ಸಂದೇಶದ ಸಾಹಿತ್ಯಗಳನ್ನು ಬಿತ್ತರಿಸುತ್ತಿದೆ. ಈ ವರ್ಷ ಅಭಿಯಾನದಲ್ಲಿ ನನ್ನ ಅರಿವಿನ ಪ್ರವಾದಿ ಎಂಬ ಪುಸ್ತಕ ನೀಡಲಾಗುತ್ತಿದೆ ಎಂದು ಸಂಘಟನೆಯ ಪುತ್ತೂರು ಕಾರ್ಯದರ್ಶಿ ರಿಯಾಜ್ ಹಾರೂನ್ ಹೇಳಿದರು.
ಉಪ್ಪಿನಂಗಡಿ ಶಾಖೆಯ ಅಧ್ಯಕ್ಷರಾದ ಅಬ್ದುಲ್ ಹಸೀಬ್ ಮಾತನಾಡಿ, ಪವಿತ್ರ ಖುರಾನ್ ಗ್ರಂಥವನ್ನು ಅರೇಬಿಕ್ ಭಾಷೆಯಿಂದ ಕನ್ನಡಕ್ಕೆ ತರ್ಜುಮೆ ಮಾಡುವ ಕಾರ್ಯ 5 ದಶಕಗಳ ಹಿಂದೆ ಆರಂಭಗೊಂಡಿದ್ದು, ಖುರಾನ್ ಸಂದೇಶವನ್ನು ಜಾತಿ, ಮತ ಭೇದವಿಲ್ಲದೆ ಎಲ್ಲ ಕನ್ನಡಿಗರೂ ಸುಲಭವಾಗಿ ಅರ್ಥ ಮಾಡಿಕೊಳ್ಳುವ ಕಾರ್ಯ ಈ ಮೂಲಕ ನಡೆದಿದೆ ಎಂದರು.

ಮುಸ್ಲಿಮರಲ್ಲಿ ದೇಶಪ್ರೇಮವಿಲ್ಲ ಎಂಬ ಅಪಪ್ರಚಾರವೊಂದು ನಡೆಯುತ್ತಿದೆ. ಇದರಲ್ಲಿ ಎಳ್ಳಿನಷ್ಟೂ ಸತ್ಯಾಂಶವಿಲ್ಲ. ಭಾರತದಲ್ಲಿ ಹುಟ್ಟಿ, ಇಲ್ಲಿನ ನೆಲ, ಜಲ, ಗಾಳಿಯಿಂದಾಗಿ ಬದುಕುತ್ತಿರುವ ನಾವು ಈ ತಾಯಿ ನೆಲವನ್ನು ಅಪಾರವಾಗಿ ಪ್ರೀತಿಸುತ್ತೇವೆ. ಮುಸ್ಲಿಮ್ ಸಮಾಜದ ಬಗ್ಗೆ ಅನೇಕ ರೀತಿಯ ಅಪನಂಬಿಕೆಗಳನ್ನು ಹುಟ್ಟು ಹಾಕಲಾಗಿದೆ. ಇದನ್ನು ಇಲ್ಲವಾಗಿಸುವ ಅಗತ್ಯವಿದೆ ಎಂದು ಪತ್ರಕರ್ತ ಎ.ಕೆ. ಕುಕ್ಕಿಲ ಹೇಳಿದರು.
ಹಿಂದೂಗಳಿಗೆ ಕಾಶಿ ಹೇಗೆ ಪವಿತ್ರ ಕ್ಷೇತ್ರವೋ ಹಾಗೆಯೇ ಮೆಕ್ಕಾ ಮುಸ್ಲಿಮರಿಗೆ ಪವಿತ್ರ ಕ್ಷೇತ್ರ. ಆ ಕಾರಣಕ್ಕೆ ನಾವು ಮೆಕ್ಕಾ ಮೇಲೆ ಗೌರವ ಇಟ್ಟಿದ್ದೇವೆ. ಅದನ್ನು ಹೊರತುಪಡಿಸಿದರೆ ನಮಗೆ ಅರೇಬಿಯಾ ಮೇಲೆ ಬೇರಾವ ಸಂಬಂಧವೂ ಇಲ್ಲ. ನಮ್ಮ ಹಿರಿಯರೆಲ್ಲರೂ ಭಾರತೀಯರು. ನಾವು ಮುಸ್ಲಿಮರಾದರೂ ಇನ್ನೊಂದು ಮುಸ್ಲಿಮ್ ದೇಶಕ್ಕೆ ಹೋಗಲು ನಮಗೆ ಮುಕ್ತ ಅವಕಾಶ ನೀಡುವುದಿಲ್ಲ. ಪಾಸ್ಪೋರ್ಟ್ ಮಾಡಲೇಬೇಕು. ಜಗತ್ತಿನಲ್ಲಿ ನಾವು ಭಾರತೀಯರೆಂದೇ ಕರೆಸಿಕೊಳ್ಳುತ್ತೇವೆ ಎಂದು ಹೇಳಿದ ಅವರು, ಧರ್ಮ ಜಿಜ್ಞಾಸೆ ಉಂಟಾದಾಗ ಧಾರ್ಮಿಕ ಮುಖಂಡರ ಮಾತುಗಳನ್ನು ಆಲಿಸಬೇಕೇ ಹೊರತು ರಾಜಕೀಯ ಮುಖಂಡರ ಮಾತು ಕೇಳಬಾರದು ಎಂದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top