ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.15 ರಿಂದ 24ರ ತನಕ ನಡೆಯುವ 89ನೇ ವರ್ಷದ “ಪುತ್ತೂರು ಶಾರದೋತ್ಸವ” ಈ ಬಾರಿ ಅತ್ಯಂತ ವೈಭವದಿಂದ ನಡೆಯಲಿದ್ದು, ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದು ಶೋಭಾಯಾತ್ರೆ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಉತ್ಸವದ ವಿವರ ನೀಡಿದ ಅವರು, 9 ದಿನಗಳು ಶಾರದೋತ್ಸವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅ. 24ರಂದು ವೈಭವದ ಶೋಭಾಯಾತ್ರೆಗೆ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡುವರು. ಶೋಭಾಯಾತ್ರೆಯಲ್ಲಿ ಸುಮಾರು 80 ಭಜನಾ ತಂಡ 1300 ಮಂದಿ ಕುಣಿತ ಭಜಕರು, 1500 ಮಂದಿ ಇತರ ಭಜಕರು ಭಜನೆ ಮೂಲಕ ತೆರಳಲಿದ್ದಾರೆ. ಅಲ್ಲದೆ ಸುಮಾರು 15 ಟ್ಯಾಬ್ಲೋ, ಪೂಜಾನೃತ್ಯ, ಡೊಳ್ಳುಕುಣಿತ, 10ಕ್ಕೂ ಅಧಿಕ ಸ್ತಬ್ಧಚಿತ್ರಗಳು ಶೋಭಾಯಾತ್ರೆಗೆ ಶೋಭೆ ತರಲಿದೆ ಎಂದು ತಿಳಿಸಿದರು.
ಶೋಭಾಯಾತ್ರೆ ಸಂದರ್ಭ ಬೊಳುವಾರಿನಿಂದ ದರ್ಬೆ ವೃತ್ತದ ತನಕ ವರ್ತಕರು ತಮ್ಮ ತಮ್ಮ ಅಂಗಡಿ ಮಳಿಗೆಗಳಿಗೆ ವಿದ್ಯುತ್ ಅಲಂಕಾರಗಳನ್ನು ಮಾಡುವ ಕುರಿತು ವಿನಂತಿಸಲಾಗಿದೆ. ಅಲ್ಲದೆ ಸಮಿತಿ ವತಿಯಿಂದ ವಿದ್ಯುತ್ ದೀಪಗಳಿಂದ ಪೇಟೆಗಳನ್ನು ಅಲಂಕಾರ ಮಾಡಲಾಗುವುದು. ದಾರಿಯುದ್ದಕ್ಕೂ ಶ್ರೀ ಶಾರದಾ ಮಾತೆಗೆ ಹಣ್ಣುಕಾಯಿ ಅರ್ಪಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು, ಭಜನಾ ಮಂದಿರ ಅಧ್ಯಕ್ಷ ಕೆ. ಸಾಯಿರಾಮ ರಾವ್, ಕಾರ್ಯದರ್ಶಿ ಕೆ. ಜಯಂತ ಉರ್ಲಾಂಡಿ, ಶೋಭಾಯಾತ್ರೆ ಸಹಸಂಚಾಲಕ ನವೀನ್ ಕುಲಾಲ್ ಉಪಸ್ಥಿತರಿದ್ದರು.