ಹೊಸದಿಲ್ಲಿ: ಭೀಕರ ಸಮರ ನಡೆಯುತ್ತಿರುವ ಇಸ್ರೇಲ್‌ನಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಕೇಂದ್ರ ಸರಕಾರ ಪ್ರಾರಂಭಿಸಿದ ಆಪರೇಷನ್ ಅಜಯ್ ಕಾರ್ಯಾಚರಣೆಯ ಮೊದಲ ವಿಮಾನ ಶುಕ್ರವಾರ ಬೆಳಗ್ಗೆ ದಿಲ್ಲಿಯಲ್ಲಿ ಬಂದಿಳಿದಿದೆ. 212 ಭಾರತೀಯರು ಈ ವಿಮಾನದಲ್ಲಿ ಬಂದಿದ್ದಾರೆ.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಇಸ್ರೇಲ್‌ನಿಂದ ಆಗಮಿಸಿದ ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಆಪರೇಷನ್ ಅಜಯ್ ಅಡಿಯಲ್ಲಿ ಇಸ್ರೇಲ್‌ನಿಂದ ಹಿಂತಿರುಗಲು ಬಯಸುವ ಭಾರತೀಯ ನಾಗರಿಕರಿಗೆ ಮರಳಲು ಅನುಕೂಲವಾಗುವಂತೆ ವಿಮಾನವು ಗುರುವಾರ ಸಂಜೆ ಟೆಲ್ ಅವಿವ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಿಂದ ಹೊರಟಿತ್ತು.
ಇಸ್ರೇಲ್ ಮೇಲೆ ಕಳೆದ ಶನಿವಾರ ಹಮಾಸ್ ಉಗ್ರರು ನಡೆಸಿದ ದಾಳಿಯ ಬಳಿಕ ಇಸ್ರೇಲ್ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದು, ಈಗಾಗಲೇ ಎರಡೂ ಕಡೆ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಇಸ್ರೇಲ್‌ನಲ್ಲಿರುವ ಸಾವಿರಾರು ಭಾರತೀಯರು ತಮ್ಮ ಪ್ರಾಣ ರಕ್ಷಣೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಕೇಂದ್ರ ಸರಕಾರ ಅಪರೇಷನ್ ಅಜಯ್ ಕಾರ್ಯಾಚರಣೆ ಪ್ರಾರಂಭಿಸಿದೆ.
ನಾವು ಅಲ್ಲಿ ಇಂಥ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಇದೇ ಮೊದಲು, ನಮ್ಮನ್ನು ಮರಳಿ ಕರೆತಂದಿದ್ದಕ್ಕೆ ಭಾರತ ಸರ್ಕಾರಕ್ಕೆ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞರಾಗಿದ್ದೇವೆ ಎಂದು ಆಪರೇಷನ್ ವಿಜಯ್ ವಿಮಾನದಲ್ಲಿ ಬಂದವರು ಹೇಳಿದ್ದಾರೆ. ಮನೆಗೆ ಮರಳಲು ಬಯಸುವ ಭಾರತೀಯರಿಗೆ ಮರಳಲು ಅನುಕೂಲವಾಗುವಂತೆ ಆಪರೇಷನ್ ಅಜಯ್ ಅನ್ನು ಪ್ರಾರಂಭಿಸುವುದಾಗಿ ವಿದೇಶಾಂಗ ಸಚಿವ ಜೈಶಂಕರ್ ಘೋಷಿಸಿದ್ದರು.
ಇಸ್ರೇಲ್‌ನಿಂದ ಹಿಂದಿರುಗಲು ಬಯಸುವ ನಮ್ಮ ನಾಗರಿಕರಿಗೆ ಮರಳಲು ಅನುಕೂಲವಾಗುವಂತೆ #OperationAjay ಅನ್ನು ಪ್ರಾರಂಭಿಸಲಾಗುತ್ತಿದೆ. ವಿಶೇಷ ಚಾರ್ಟರ್ ವಿಮಾನಗಳು ಮತ್ತು ಇತರ ವ್ಯವಸ್ಥೆಗಳನ್ನು ಇರಿಸಲಾಗುತ್ತಿದೆ ಎಂದು ಜೈಶಂಕರ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದರು. ಬೆನ್ ಗುರಿಯಾನ್ ಇಸ್ರೇಲ್ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಲಾಡ್ ನಗರದ ಉತ್ತರ ಹೊರವಲಯದಲ್ಲಿದೆ.