ಡೆಹ್ರಾಡೂನ್: ಹಿಮದಿಂದ ಕೂಡಿದ ಶಿಖರಗಳಿಲ್ಲಿ ಮೈ ಕೊರೆಯುವ ಚಳಿ. ಇಂತಹ ಚಳಿಯಲ್ಲಿ ವಿಶೇಷ ದಿರಸಿನಿಂದ ಕಂಗೊಳಿಸುತ್ತಿದ್ದ ನರೇಂದ್ರ ಮೋದಿ ಮೌನಕ್ಕೆ ಶರಣಾಗಿದ್ದರು. ಇದು ಪಾರ್ವತಿ ಕುಂಡ್’ನಲ್ಲಿ ನರೇಂದ್ರ ಮೋದಿ ಕಂಡ ರೀತಿ.
ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ನೆರವೇರಿಸಲು ಉತ್ತರಾಖಂಡಕ್ಕೆ ತೆರಳಿದ್ದಾರೆ. ಇದೇ ವೇಳೆ ಅವರು ಪಿಥೋರ್‌ಗಢದಲ್ಲಿರುವ ಪಾರ್ವತಿ ಕುಂಡ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಹಿಮಚ್ಛಾದಿತ ಬೆಟ್ಟಗಳ ಮಧ್ಯೆ ಕೆಲ ನಿಮಿಷಗಳ ಕಾಲ ಧ್ಯಾನದಲ್ಲಿ ತೊಡಗಿದರು.
ಪೂಜೆ, ಧ್ಯಾನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೊಗಳನ್ನು ಹಂಚಿಕೊಂಡಿರುವ ನರೇಂದ್ರ ಮೋದಿ, “ದೇವಭೂಮಿ ಉತ್ತರಾಖಂಡದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಹಲವು ಯೋಜನೆಗಳಿಗೆ ಅಡಿಗಲ್ಲು, ಚಾಲನೆ ನೀಡಲು ಇಲ್ಲಿಗೆ ಆಗಮಿಸಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ನರೇಂದ್ರ ಮೋದಿ ಅವರು ರಸ್ತೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಹಾಗೆಯೇ, ಗುಂಜ್ ಗ್ರಾಮದಲ್ಲಿರುವ ಜಾಗೇಶ್ವರ ಧಾಮಕ್ಕೂ ಪ್ರಧಾನಿ ಭೇಟಿ ನೀಡಿದ್ದು, ಅಲ್ಲೂ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಡೀ ದಿನ ಅವರು ಉತ್ತರಾಖಂಡದಲ್ಲಿಯೇ ಕಾಲ ಕಳೆಯಲಿದ್ದಾರೆ.
ಜೋಲಿಂಗ್‌ಕಾಂಗ್‌ನಲ್ಲಿರುವ ಆದಿ ಕೈಲಾಸ ಗಿರಿ ಮೂಲಕ ಅವರು ಉತ್ತರಾಖಂಡ ಭೇಟಿ ಆರಂಭಿಸಿದ್ದಾರೆ. ಗಡಿಯಲ್ಲಿ ಚೀನಾ ಆಗಾಗ ಉಪಟಳ ಮಾಡುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರ ಭೇಟಿಯು ಪ್ರಾಮುಖ್ಯತೆ ಪಡೆದಿದೆ.