ಆಕಾಂಕ್ಷಿಗಳ ಸಂಖ್ಯೆಯಿಂದ ನಾಯಕರು ಕಕ್ಕಾಬಿಕ್ಕಿ
ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಈಗ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಅರ್ಜಿ ಹಾಕಿ ಟಿಕೆಟ್ ಕೇಳುವ ತಂತ್ರಕ್ಕೆ ಮೊರೆ ಹೋದ ಪರಿಣಾಮವಾಗಿ ಒಂದೊಂದು ಕ್ಷೇತ್ರಗಳಿಂದಲೂ ೮-೧೦ ಆಕಾಂಕ್ಷಿಗಳು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಯಾರಿಗೆ ಟಿಕೆಟ್ ನೀಡಿದರೂ ಬಂಡಾಯ ಏಳುವ ಸಾಧ್ಯತೆಯಿರುವುದರಿಂದ ಕಾಂಗ್ರೆಸ್ ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಹಂಚಿಕೆಗೆ ಮೂರು ಸೂತ್ರಗಳನ್ನು ಅನ್ವಯಿಸಲು ನಿರ್ಧರಿಸಿದ್ದಾರೆ.
ಮೊದಲ ಸೂತ್ರವೆಂದರೆ ಈಗಿರುವ ಎಲ್ಲ ಹಾಲಿ ಶಾಸಕರು ಹಾಗೂ ಕಳೆದ ಬಾರಿಯ ಚುನಾವಣೆಯಲ್ಲಿ 5 ಸಾವಿರಕ್ಕೂ ಕಡಿಮೆ ಮತಗಳ ಅಂತರದಲ್ಲಿ ಸೋತವರಿಗೆ ಟಿಕೆಟ್ ನೀಡುವುದು.
ಎರಡನೇ ಸೂತ್ರವೆಂದರೆ ಪಕ್ಷವು ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಮತದಾರರ ಒಲವು ಗಳಿಸಿ ಜಯ ಸಾಧಿಸುವ ಅಭ್ಯರ್ಥಿಗಳೆಂದು ಗುರುತಿಸಿಕೊಂಡವರಿಗೆ ಟಿಕೆಟ್ ನೀಡುವುದು
ಮೂರನೇ ಸೂತ್ರವೆಂದರೆ ತಮ್ಮ ಕ್ಷೇತ್ರಗಳಲ್ಲಿ ಜನಪ್ರಿಯತೆ, ಸಾಮರ್ಥ್ಯ ಹಾಗೂ ಮತದಾರರ ಮೇಲೆ ಪ್ರಭಾವ ಬೀರುವ ಛಾತಿ ಹೊಂದಿದವರಿಗೆ ಟಿಕೆಟ್ ನೀಡುವುದು.
ಈಗಾಗಲೇ ಒಂದೊಂದು ಕ್ಷೇತ್ರದಲ್ಲಿ ಹಲವು ಮುಖಂಡರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಈ ಆಕಾಂಕ್ಷಿಗಳಲ್ಲಿ ಹೊಸಬರು ಹಾಗೂ ಹಳಬರು ಸೇರಿಕೊಂಡಿದ್ದಾರೆ. ಟಿಕೆಟ್ ಕೈತಪ್ಪಿದ ಅಭ್ಯರ್ಥಿಗಳು ಬಂಡಾಯ ಏಳುವ ಸಾಧ್ಯತೆಗಳೂ ಹೆಚ್ಚಿವೆ. ಹೊರನೋಟಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅನ್ಯೋನ್ಯವಾಗಿರುವಂತೆ ಕಾಣುತ್ತಾರೆ. ಆದರೆ ಈ ಇಬ್ಬರು ನಾಯಕರ ನಡುವೆ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ವೈಮನಸ್ಸಿಋುವುದು ಗುಟ್ಟಾಗಿ ಉಳಿದಿಲ್ಲ. ಕೆಲವು ಕ್ಷೇತ್ರಗಳಲ್ಲಿ ಹಳೆಯ ನಾಯಕರು ಹಾಗೂ ಹೊಸಬರ ನಡುವೆ ನಡುವೆ ಸಂಘರ್ಷ ಏರ್ಪಟ್ಟಿದೆ. ಪಕ್ಷದ ಆಂತರಿಕ ಬೆಳವಣಿಗೆಯನ್ನು ನೋಡುವುದಾದರೆ, ಕೆಲ ಹೊಸಬರಿಗೆ ಕೈ ನಾಯಕರು ಮಣೆ ಹಾಕಲಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದು ಕಾಂಗ್ರೆಸ್‌ಗೆ ಬಂಡಾಯದ ಬಿಸಿ ಉಂಟು ಮಾಡುವ ಸಾಧ್ಯತೆ ಇದೆ.