ಪುತ್ತೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ. 15ರಿಂದ 24ರತನಕ ನಡೆಯಲಿರುವ 89ನೇ ವರ್ಷದ ಪುತ್ತೂರು ಶಾರದೋತ್ಸವದ ಆಮಂತ್ರಣ ವಿತರಣೆಗೆ ದರ್ಬೆ ವೃತ್ತದ ಬಳಿ ಗುರುವಾರ ಚಾಲನೆ ನೀಡಲಾಯಿತು.
ಬಳಿಕ ಚೆಂಡೆ, ಕಲ್ಲಡ್ಕ ಬೊಂಬೆಯೊಂದಿಗೆ ಬೊಳುವಾರು ತನಕ ಸಾಗಿ ಆಮಂತ್ರಣ ಪತ್ರಿಕೆಯನ್ನು ಪೇಟೆಯ ವರ್ತಕರಿಗೆ ವಿತರಿಸಲಾಯಿತು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಆಮಂತ್ರಣ ಪತ್ರಿಕೆ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಪುತ್ತೂರು ಶಾರದೋತ್ಸವ ಈ ಬಾರಿ ವೈಭವದ ಮೆರುಗಿನೊಂದಿಗೆ ನಡೆಯಲಿದೆ. ಮಡಿಕೇರಿ, ಮಂಗಳೂರಿನಲ್ಲಿ ನಡೆಯಲಿರುವ ದಸರಾ ವೈಭವದಂತೆ ಕಂಗೊಳಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು, ಶೋಭಾಯಾತ್ರೆ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಸಂಚಾಲಕ ಪಿ.ಜಿ. ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಭಜನಾ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಸಾಯಿರಾಮ್ ರಾವ್, ಕಾರ್ಯದರ್ಶಿ ಕೆ.ಜಯಂತ ಉರ್ಲಾಂಡಿ, ಕೋಶಾಧಿಕಾರಿ ತಾರನಾಥ ಎಚ್., ಸದಸ್ಯರು ಉಪಸ್ಥಿತರಿದ್ದರು