ಮುಂಬಯಿ: ಪಿಎಫ್ಐ ಸಂಬಂಧಿತ ಪ್ರಕರಣದಲ್ಲಿ ದಾಳಿ ನಡೆಸುತ್ತಿರುವ ಎನ್ಐಎ ತಂಡ 7/11 ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಖುಲಾಸೆಗೊಳಿಸುವ ಮೊದಲು ಬುಧವಾರ ಉಪನಗರ ವಿಕ್ರೋಲಿಯ ಆತನ ನಿವಾಸಕ್ಕೆ ತೆರಳಿದ್ದು, ಈ ವೇಳೆ ಮನೆಯ ಬಾಗಿಲು ತೆರೆಯದ ಕಾರಣ ಆರು ಗಂಟೆಗಳಿಗೂ ಹೆಚ್ಚು ಕಾಲ ಮನೆಯ ಹೊರಗೆ ಕಾಯಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬಿಹಾರ ಪ್ರವಾಸದ ವೇಳೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಿಎಫ್ಐ ವಿರುದ್ಧ ದೇಶದ ಆರು ರಾಜ್ಯಗಳ ಹಲವು ಸ್ಥಳಗಳಲ್ಲಿ ನಡೆಸಿದ ದಾಳಿಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಕ್ರಮ ಕೈಗೊಂಡಿದೆ.
ಮುಂಬೈ ಪೊಲೀಸರೊಂದಿಗೆ ಎನ್ಐಎ ತಂಡ 7/11 ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಬ್ದುಲ್ ವಾಹಿದ್ ಶೇಖ್ ನಿವಾಸವನ್ನು ಬೆಳಗ್ಗೆ 5 ಗಂಟೆಗೆ ತಲುಪಿತ್ತು ಆದರೆ ಶೇಖ್ ಆರು ಗಂಟೆಗಳಿಗೂ ಹೆಚ್ಚು ಕಾಲ ಬಾಗಿಲು ತೆರೆಯದೇ ಅಧಿಕಾರಿಗಳನ್ನು ಹೊರಗೆ ಕಾಯುವಂತೆ ಮಾಡಿ ಸತಾಯಿಸಿದ ಎಂದು ಅಧಿಕಾರಿ ಹೇಳಿದರು.
ಮನೆಯೊಳಗಿಂದ, ಶೇಖ್ ಸರ್ಚ್ ವಾರಂಟ್ ತಂದಿದ್ದೀರಾ ಎಂದು ಎನ್ಐಎ ಅಧಿಕಾರಿಗಳನ್ನು ಕೇಳಿದ್ದು ವಕೀಲರು ಮತ್ತು ಕೆಲವು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಸ್ಥಳಕ್ಕೆ ತಲುಪಿದ ನಂತರ ಬೆಳಗ್ಗೆ 11.15ರ ಸುಮಾರಿಗೆ ಬಾಗಿಲು ತೆರೆದ ಎಂದು ಅಧಿಕಾರಿಗಳು ಹೇಳಿದರು.
ಶೇಖ್ ನಿವಾಸದ ಹೊರಗೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬಂದಿಯನ್ನು ನಿಯೋಜಿಸಿ ಐದು ಗಂಟೆಗಳಿಗೂ ಹೆಚ್ಚು ಶೋಧ ನಡೆಸಲಾಗಿದೆ. ಪೊಲೀಸರು ಮತ್ತು ಕೆಲವರು ಬೆಳಗ್ಗೆ 5 ಗಂಟೆಯಿಂದಲೇ ತಮ್ಮ ನಿವಾಸದ ಹೊರಗೆ ಜಮಾಯಿಸಿದ್ದಾರೆ ಎಂದು ಶೇಖ್ ವಾಟ್ಸಾಪ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ. ನನ್ನ ಮನೆಗೆ ಪ್ರವೇಶಿಸಲು ಬಯಸಿ ಬಾಗಿಲು ಮುರಿದು ನನ್ನ ಮನೆಯ ಸಿಸಿಟಿವಿ ಕೆಮರಾವನ್ನು ಹಾನಿಗೊಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಅಥವಾ ಯಾವುದೇ ಎಫ್ಐಆರ್ ಅನ್ನು ನನಗೆ ತೋರಿಸುತ್ತಿಲ್ಲ “ಎಂದು ಆರೋಪಿಸಿದ್ದನಂತೆ.