ಪುತ್ತೂರು: ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ. 6ರಂದು ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, 5ರಂದು ಸಂಜೆ 6.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸುವರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭ ವೆಂಕಟ್ರಮಣ ನಕ್ಷತ್ರಿತ್ತಾಯ, ಅರಣ್ ರೈ ಡಿಂಬ್ರಿ, ನವೀನ್ ಕಿನ್ನಿಮಜಲು, ಗೀತಾ, ರಾಮಣ್ಣ ಪಡ್ಪು ಅವರನ್ನು ಸನ್ಮಾನಿಸಲಾಗುವುದು. ಬಳಿಕ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಅವರಿಂದ ತ್ರಿಜನ್ಮಮೋಕ್ಷ ಯಕ್ಷಗಾನ ಬಯಲಾಟ ನಡೆಯಲಿದೆ.
ಜ. 6ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಅರ್ಧ ಏಕಾಹ ಭಜನೆ ನಡೆಯಲಿದೆ. ಬೆಳಿಗ್ಗೆ 8ಕ್ಕೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಮಹಾಗಣಪತಿ ಹೋಮ ಕಲಶಪೂಜೆ, ಆಶ್ಲೇಷ ಬಲಿ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಸಂಜೆ 6ರಿಂದ ಪುತ್ತೂರು ನೃತ್ಯಪಾಸನಾ ಕಲಾಕೇಂದ್ರದಿಂದ ನೃತ್ಯೋಹಂ ಭರತನಾಟ್ಯ ನಡೆಯಲಿದೆ. ರಾತ್ರಿ 7ಕ್ಕೆ ದೈವಗಳ ಭಂಡಾರ ತೆಗೆದು, ರಾತ್ರಿ 8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 8.30ಕ್ಕೆ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಬೆಡಿ ಪ್ರದರ್ಶನ, ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ, ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 10.30ರಿಂದ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.