ಪುತ್ತೂರು: ನ.25 ಹಾಗೂ 26ರಂದು ಬೆಂಗಳೂರಿನಲ್ಲಿ ಕಂಬಳ ನಡೆಯಲಿದ್ದು, ಈ ನಿಟ್ಟಿನಲ್ಲಿ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಂಗಳೂರಿನ ಕಂಬಳ ಯಶಸ್ವಿಯಾಗುವ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ನ. 25ರಂದು ಬೆಳಿಗ್ಗೆ 10.30ಕ್ಕೆ ಕೆರೆ ಮುಹೂರ್ತ ನಡೆಯಲಿದೆ. ಕಂಬಳದ ಯಶಸ್ಸಿಗಾಗಿ ಈಗಾಗಲೇ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷ ಮರ್ದಿನಿ ದೇವರ ಅನುಗ್ರಹ ಬೇಡಲಾಗಿದ್ದು, ಇದೀಗ ಸೀಮೆ ದೇವರು ಶ್ರೀ ಮಹಾಲಿಂಗೇಶ್ವರನ ಅನುಗ್ರಹಕ್ಕಾಗಿ ಪ್ರಾರ್ಥಿಸಲಾಗಿದೆ. ತುಳುನಾಡ ಕ್ರೀಡೆ ಒಳ್ಳೆಯ ರೀತಿಯಲ್ಲಿ ನಡೆಯಬೇಕು. ಜನರ ಸಹಕಾರ ಸಹಕಾರದ ಜತೆಗೆ ಸರಕಾರದ ಸಹಕಾರವೂ ಸಿಗಬೇಕು. ಇದು ಕೇವಲ ಒಂದು ಪಕ್ಷದ ವಿಚಾರ ಅಲ್ಲ. ಎಲ್ಲಾ ಪಕ್ಷಗಳು ಸೇರಿಕೊಂಡು ಕಂಬಳ ಕ್ರೀಡೆಯನ್ನು ದೇಶಕ್ಕೆ ಪರಿಚಯ ಮಾಡುವ ಉದ್ದೇಶವಾಗಿದೆ. ಈ ಕುರಿತು ಸಮಿತಿಗಳನ್ನು ರಚಿಸಿ ಹಂತ ಹಂತವಾಗಿ ಜನರಿಗೆ ಮಾಹಿತಿ ನೀಡಲಾಗುವುದು ಎಂದ ಅವರು, ಈಗಾಗಲೇ 78 ಜತೆ ಕೋಣಗಳ ನೋಂದಾವಣೆಯನ್ನು ಸ್ವಯಂ ಆಗಿ ಕೋಣದ ಮಾಲಿಕರೇ ಮಾಡಿದ್ದಾರೆ. ಇನ್ನಷ್ಟು ಜೋಡಿ ಕೋಣಗಳು ಜೋಡಣೆಯಾಗಲಿದೆ ಎಂದರು.
ನ. 24ರಂದು ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ರೈಲಿನ ಬುಕ್ಕಿಂಗ್ ಫುಲ್ ಆಗಿದೆ. ಸುಮಾರು 200 ಬಸ್ಸುಗಳು ಭರ್ತಿಯಾಗಿವೆ. ಹೆಚ್ಚುವರಿ ರೈಲು ಓಡಿಸಲು ರೈಲ್ವೇ ಮಂತ್ರಿಗಳಿಗೆ ಮನವಿ ಮಾಡಲಾಗುವುದು. ಒಟ್ಟಿನಲ್ಲಿ ಕಂಬಳ ವೀಕ್ಷಿಸಲು ಬೆಂಗಳೂರಿನ ಜನತೆ ತುದಿಗಾಲಿನಲ್ಲಿ ನಿಂತಿದ್ದಾರೆ. ಕಂಬಳದ ವೆಚ್ಚವನ್ನು ಈಗಾಗಲೇ ನಿರ್ಧರಿಸಲಾಗಿಲ್ಲ. ಆದರೂ ಅಂದಾಜು ಎರಡು ಕೋಟಿ ಬೇಕಾಗಬಹುದು. ಕಂಬಳ ನಡೆಯುವ ಪ್ರದೇಶದಲ್ಲಿ ಸುಮಾರು 100-125 ಸ್ಟಾಲ್‍ಗಳನ್ನು ತೆರೆಯಲಾಗುವುದು. ಒಟ್ಟಾರೆಯಾಗಿ 48 ಗಂಟೆಗಳ ಕಂಬಳದ ಮೂಲಕ ಕಂಬಳ ಕ್ರೀಡೆಯನ್ನು ದೇಶಕ್ಕೆ ಪರಿಚಯಿಸುವ ಕೆಲಸ ಆಗಲಿದೆ ಎಂದು ಅವರು ಹೇಳಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯ ಶೇಖರ್ ನಾರಾವಿ, ಕೈಪ ಕೇಶವ ಬೆಳ್ಳಿಪ್ಪಾಡಿ, ಕೃಷ್ಣಪ್ರಸಾದ್ ಆಳ್ವ ಪ್ರಸನ್ನ ಕುಮಾರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.