ಸುಬ್ರಹ್ಮಣ್ಯ: ಕುಮಾರಸ್ವಾಮಿಯವರು ಈಗಾಗಲೇ ಗೃಹಮಂತ್ರಿ ಜೊತೆ ಚರ್ಚೆ ನಡೆಸಿದ್ದಾರೆ. ಸೀಟು ಹಂಚಿಕೆಯ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಷ್ಟೇ. ದಸರಾ ಕಳೆದು ಸೀಟು ಹಂಚಿಕೆ ಕುರಿತು ಚರ್ಚೆ ನಡೆಯಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ದಕ್ಷಿಣ ಭಾರತದ ಹೆಸರಂತ ನಾಗ ಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಮೈತ್ರಿಗೆ ಮೊದಲು ಜೆಡಿಎಸ್’ನ 19 ಶಾಸಕರು, 8 ಸಂಸದರು ಪಕ್ಷದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಜೊತೆ ಎರಡು ಸುತ್ತು ಮಾತುಕತೆ ನಡೆಸಲಾಗಿದೆ. ಬಳಿಕ ಕುಮಾರಸ್ವಾಮಿ ಅವರು ಗೃಹಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಸೆಸ್ಸನ್ ಕಳೆದು ನನ್ನ ಆರೋಗ್ಯ ಸುಧಾರಿಸಿದರೆ, ನಾನು ಅಥವಾ ಕುಮಾರಸ್ವಾಮಿ ಮತ್ತೆ ಗೃಹಮಂತ್ರಿಗಳ ಜೊತೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಹಿಂದಿನ ಚುನಾವಣೆಯ ಮತ ಗಳಿಕೆ ಒಟ್ಟು ಗೂಡಿಸಿ ಒಂದು ನಿರ್ಧಾರಕ್ಕೆ ಬರಲಾಗಿದೆ. ಆದರೆ ಯಾವ ಕ್ಷೇತ್ರ ಅನ್ನೋ ಬಗ್ಗೆ ಇನ್ನೂ ಫೈನಲ್ ಆಗಿಲ್ಲ. ಮಂಡ್ಯ ಸೇರಿದಂತೆ ಯಾವುದೇ ತೀರ್ಮಾನ ಆಗಿಲ್ಲ. ಸದ್ಯ ಹಾಸನ ಜೆಡಿಎಸ್, ರಾಮನಗರ ಕಾಂಗ್ರೆಸ್ ಕೈಯಲ್ಲಿದೆ. ಉಳಿದೆಡೆ ಬಿಜೆಪಿನೇ ಇದೆ. ಕಾಂಗ್ರೆಸ್ ನವರು 28 ಕ್ಷೇತ್ರಗಳನ್ನು ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಆ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಒಂದುಗೂಡುವ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.
ಜಾತಿ ಆಧಾರದಲ್ಲಿ ಮತ ವಿಭಜನೆಯ ಬಗ್ಗೆ ನಾನು ಈಗ ವಾದ ಮಾಡಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾವಾರು ಮತ ಬಿಜೆಪಿಗೆ 30-33, ಕಾಂಗ್ರೆಸ್ 40, ಜೆಡಿಎಸ್ 20, 22 ಸಿಕ್ಕಿದೆ. ಈ ಬಾರಿ ಯಾರಿಗೆ ಓಟ್ ಮಾಡಬೇಕು ಅನ್ನೋದನ್ನ ಮತದಾರ ತೀರ್ಮಾನ ಮಾಡ್ತಾನೆ ಎಂದು ಎಚ್.ಡಿ.ದೇವೇಗೌಡರು ಹೇಳಿಕೆ ನೀಡಿದ್ದಾರೆ.