ಪುತ್ತೂರು: ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತ. ದೇಶದ ಸ್ವಾತಂತ್ರ್ಯಕ್ಕೆ ಇಲ್ಲಿರುವ ಎಲ್ಲಾ ಧರ್ಮಗಳ ನೇತಾರರು ಹೋರಾಟ ಮಾಡಿದ್ದಾರೆ. ಪ್ರಾಣತ್ಯಾಗವನ್ನೂ ಮಾಡಿದ್ದಾರೆ. ನಮ್ಮ ದೇಶಕ್ಕೆ ಸುಲಭದಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಆದರೆ ನಾವಿಂದು ದೇಶದ ಇತಿಹಾಸವನ್ನು ಮರೆತು ಧರ್ಮ, ಜಾತಿಯ ಹೆಸರಿನಲ್ಲಿ ಕಚ್ಚಾಟ ನಡೆಸಿ ಭಾರತದ ಸೌಂದರ್ಯವನ್ನೇ ಹಾಳುಮಾಡುತ್ತಿದ್ದೇವೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಬೆಟ್ಟಂಪಾಡಿ ಗ್ರಾಮದ ಇರ್ದೆ ಪೇರಲ್ತಡ್ಕದಲ್ಲಿ ನವೀಕೃತಗೊಂಡ ಮಸೀದಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲಾ ಧರ್ಮಗಳು ನ್ಯಾಯ, ಸತ್ಯ, ಅಹಿಂಸೆಯನ್ನೇ ಕಲಿಸುತ್ತದೆ. ಆದರೆ ಆ ಧರ್ಮವನ್ನು ನಂಬಿರುವ ನಾವು ನಾನು ಮೇಲು ಅವನು ಕೀಳು ಎಂಬ ದೃಷ್ಟಿಯಿಂದ ಕಚ್ಚಾಟ ಮಾಡುತ್ತಿದ್ದೇವೆ. ಭಾರತ ವಿಶ್ವಗುರುವಾಗಬೇಕಾದರೆ ದೇಶದಲ್ಲಿ ಕೋಮು ಸೌಹಾರ್ಧತೆ ನೆಲೆಯೂರಬೇಕು, ಪ್ರತೀಯೊಬ್ಬ ಭಾರತೀಯರೂ ಒಂದೇ ತಾಯಿ ಮಕ್ಕಳಂತೆ ಬಾಳಿಬದುಕಬೇಕಾಗಿದೆ ಎಂದು ಹೇಳಿದರು.
ಮಂಜೇಶ್ವರ ಶಾಸಕ ಎಂ ಕೆ ಎಂ ಅಶ್ರಫ್ ಮಾತನಾಡಿ, ಭಾರತದ ಜಾತ್ಯಾತೀತ ತತ್ವ. ಅದು ಎಂದೆಂದೂ ಇಲ್ಲಿ ನೆಲೆ ನಿಲ್ಲಿದೆ. ಅದನ್ನು ತೊಡೆದು ಹಾಕಲು ಯಾವ ಕೋಮು ಶಕ್ತಿಗೂ ಸಾಧ್ಯವಿಲ್ಲ. ದೇಶದಲ್ಲಿ 90 ಶೇ. ಜನರಲ್ಲಿ ಹರಿಯುವ ರಕ್ತ ಅದು ಸೌಹಾರ್ಧತೆಯ ರಕ್ತವಾಗಿದೆ. ದೇಶದ ಸೌಹಾರ್ಧತೆಯನ್ನು ಹಾಳು ಮಾಡುವ ಶಕ್ತಿಗಳ ವಿರುದ್ದ ನಾವು ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಸೌರ್ಹಾರ್ದತೆ ಎಂಬುದು ಹೃದಯದಲ್ಲಿ ಹುಟ್ಟುವಂತದ್ದು. ಕೋಮುವಾದ ಮೈಗೂಡಿಸಿಕೊಂಡಲ್ಲಿ ಈ ದೇಶದಲ್ಲಿ ಬದುಕುವುದು ಕಷ್ಟ ಸಾಧ್ಯವಾಗಿದೆ. ಕೋಮುವಾದವನ್ನು ಮಾಡಿ ಜನರ ನಡುವೆ ಕಲಹ ಸೃಷ್ಟಿಸಿದವರು ಯಾವ ಸಾಧನೆಯನ್ನು ಮಾಡಿಲ್ಲ, ಇನ್ನೂ ಮಾಡುವುದು ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಹಾಗೂ ಮಂಜೇಶ್ವರ ಶಾಸಕ ಎಂ ಕೆ ಎಂ ಅಶ್ರಫ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಸ್ವಾಗತಿಸಿದರು. ಆಸಿಫ್ ಹಾಜಿ ತಂಬುತ್ತಡ್ಕ ವಂದಿಸಿದರು.