ಪುತ್ತೂರು: ರಾಷ್ಟ್ರ ಭಕ್ತಿಯೊಂದಿಗೆ ಧರ್ಮ ಸಂರಕ್ಷಣೆ ಉಳಿವಿನ ಹೋರಾಟಕ್ಕೆ ಹಿಂದೂ ಸಮಾಜ ಮುನ್ನುಗ್ಗಬೇಕಾಗಿದೆ. ರಾಷ್ಟ್ರೀಯ ಗ್ರಂಥ ರಾಮಾಯಣ ಆಗಿರುವ ಹಿನ್ನಲೆಯಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ಮಂದಿರ ರಾಷ್ಟ್ರ ಮಂದಿರವಾಗುವ ಜತೆಗೆ ರಾಷ್ಟ್ರೀಯ ತೀರ್ಥ ಕ್ಷೇತ್ರವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜ್ಯೇಷ್ಠ ಪ್ರಚಾರಕ್ ಸು. ರಾಮಣ್ಣ ಹೇಳಿದರು.
ಅವರು ಶನಿವಾರ ಕಿಲ್ಲೆಮೈದಾನದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ನಡೆದ ಶೌರ್ಯ ಜಾಗರಣ ರಥಯಾತ್ರೆಯ ಅಂಗವಾಗಿ ಬೃಹತ್ ಹಿಂದೂ ಶೌರ್ಯ ಸಂಗಮದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದರು.
ಶೀಲವಿಲ್ಲದ ಶೌರ್ಯ ವಿನಾಶಕಾರಿ, ಶೀಲದಿಂದ ಕೂಡಿದ ಶೌರ್ಯ ಕಲ್ಯಾಣಕಾರಿ. ಶೀಲ ಹಾಗೂ ಶೌರ್ಯ ಆಂಜನೇಯನಲ್ಲಿದ್ದು, ಅದನ್ನು ನಮ್ಮ ವ್ಯಕ್ತಿತ್ವದಲ್ಲಿ ತುಂಬಿಕೊಳ್ಳಬೇಕು.
ತತ್ವ ಪೂಜೆ ನಡೆಯಬೇಕು ಹೊರತು ವ್ಯಕ್ತಿ ಪೂಜೆಯಾಗಬಾರದು. ಶ್ರೀರಾಮ ರಾಷ್ಟ್ರೀಯ ಮೂರ್ತರೂಪನಾಗಿದ್ದು, ರಾಷ್ಟ್ರೀಯತೆಯ ರಾಜಕಾರಣ ನಡೆಯಬೇಕಾಗಿದೆ. ವಿಶ್ವಾಸ, ನಂಬಿಕೆಗೆ ಮುಪ್ಪು ಬರಬಾರದು. ಅದು ಮರಳಿ ಅರಳುವ ಕಾರ್ಯ ನಡೆಯಬೇಕು. ಇಂಡಿಯಾ ಮಲಗಿ ಭಾರತ ಏಳುತ್ತಿದ್ದು, ನಿದ್ದೆಯಲ್ಲಿರುವವರನ್ನು ಎಚ್ಚರಿಸುವ ಕೆಲಸವಾಗಬೇಕು. ಮಗ್ಗಲು ಬದಲಿಸುತ್ತಿರುವ ದೇಶದಲ್ಲಿ ಹಿಂದು ಎದ್ದು ನಿಲ್ಲಬೇಕಾಗಿದೆ. ಅಧಿಕಾರಕ್ಕಾಗಿ ಹಪಹಪಿಸಿದ ಹನುಮಂತನನ್ನು ಬಜರಂಗಳದ ಕಾರ್ಯಕರ್ತರು ಆದರ್ಶವಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷದ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲೆಯ ಅಧ್ಯಕ್ಷ ಕೃಷ್ಣಪ್ರಸನ್ನ, ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸಹಸಂಚಾಲಕ ಲತೀಶ್ ಗುಂಡ್ಯ, ಪುತ್ತೂರು ನಗರ ಪ್ರಖಂಡ ಸಂಯೋಜಕ ಜಯಂತ್ ಕುಂಜೂರುಪಂಜ, ಉಪ್ಪಿನಂಗಡಿ ಪ್ರಖಂಡ ಸಂಯೋಜಕ ಸಂತೋಷ್, ಬೆಳ್ತಂಗಡಿ ಪ್ರಖಂಡ ಸಂಯೋಜಕ ಸಂತೋಷ್ ಅತ್ತಾಜೆ, ಶೌರ್ಯ ಜಾಗರಣ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ, ಸಂಚಾಲಕ ಕೃಷ್ಣ ಪ್ರಸಾದ್ ಬೆಟ್ಟ ಉಪಸ್ಥಿತರಿದ್ದರು.
ಶೌರ್ಯ ಜಾಗರಣ ರಥಯಾತ್ರೆ ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ ಸ್ವಾಗತಿಸಿದರು. ಬಜರಂಗದಳ ಕರ್ನಾಟಕ ದಕ್ಷಿಣಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಪ್ರಸ್ತಾವನೆಗೈದರು. ಕಿರಣ್ ಕುಮಾರ್ ಗಾನಸಿರಿ ತಂಡ ವೈಯಕ್ತಿಕ ಗೀತೆ ಹಾಡಿದರು. ಗ್ರಾಮಾಂತರ ಪ್ರಖಂಡ ಸಂಯೋಜಕ ವಿಶಾಖ್ ಸಸಿಹಿತ್ಲು ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.