ಪುತ್ತೂರು: ಪುತ್ತೂರಿನ ಅಭಿವೃದ್ಧಿ ದೃಷ್ಟಿಯಿಂದ ಭೂಸ್ವಾಧೀನ ಅಗತ್ಯವಿದ್ದರೆ ಅದರ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು. 100 ಕೋಟಿ ರೂ. ಹೆಚ್ಚುವರಿ ಅನುದಾನ ಇಡುವ ಕಾರ್ಯವನ್ನು ಸರಕಾರ ಮಾಡಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಶನಿವಾರ ಒಳಚರಂಡಿ ಹಾಗೂ ಜಲಸಿರಿ ಯೋಜನೆಯ ಕುರಿತು ನಗರಸಭೆ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಅಧಿಕಾರ ಇದ್ದೂ ದಿನ ದೂಡುವ ಹಾಗಾಗಬಾರದು. ಅದರ ಬದಲು ಅಭಿವೃದ್ಧಿ ಕಾರ್ಯವನ್ನು ಮಾಡಿ ತೋರಿಸಬೇಕು. ಪುತ್ತೂರಿನಲ್ಲಿ ಯುಜಿಡಿ ಇಲ್ಲದ ಕಾರಣ ಬಾವಿಗಳ ನೀರು ಕಲುಷಿತವಾಗುತ್ತಿದೆ. ಕಾಂಕ್ರೀಟ್ ರಸ್ತೆಯನ್ನು ಮಾಡಬೇಕಾದರೆ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು. ಯೊಜನೆಯ ಪ್ರಸ್ತಾವನೆಯನ್ನು ನೀಡಿದಲ್ಲಿ ಅಗತ್ಯ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಇಫ್ರಾಸ್ಟ್ರಕ್ಚರ್ ಡೆವಲಪ್’ಮೆಂಟ್ ಫೌಂಡೇಶನ್ ಸಂಯೋಜಕ ಧರ್ಮರಾಜ್ ಮಾತನಾಡಿ, ಪುತ್ತೂರಿನ ಹೆಚ್ಚಿನ ಪ್ರದೇಶ ಏರು ತಗ್ಗು, ಗುಂಡಿಗಳಿಂದ ಕೂಡಿದೆ. ಆದ್ದರಿಂದ ಒಳಚರಂಡಿ ಡಿಪಿಆರ್ ಮಾಡುವ ಸಂದರ್ಭ ಹೆಚ್ಚಿನ ಅಧ್ಯಯನ ಅಗತ್ಯವಿದೆ. ಯುಜಿಡಿ ಮಾಡುವ ಸಂದರ್ಭ ಡ್ರೋನ್ ಸರ್ವೇ ನಡೆಸಿ ಬೇಸ್ ಮ್ಯಾಪ್ ಮಾಡುವುದು ಉತ್ತಮ. ಇದರಿಂದ ಯೋಜನೆಯನ್ನು ನಿಖರವಾಗಿ ಮಾಡಬಹುದು. ಪ್ರದೇಶದ ಕಟ್ಟಡಗಳಿಗೆ ಅನುಗುಣವಾಗಿ ಪೈಪ್ ಗಳ ಸಾಮರ್ಥ್ಯವನ್ನು ನಿರ್ಧರಿಸಬೇಕು. ಪುತ್ತೂರಿನಲ್ಲಿ ಸುಮಾರು 32 ಚದರ ಕಿ.ಮೀ. ಇದ್ದು, ಒಂದು ಚದರ ಕಿ.ಮೀ. ದಾಖಲೆ ಸಂಗ್ರಹಣೆಗೆ 3 ಲಕ್ಷ ಖರ್ಚು ತಗುಲುತ್ತದೆ. ರಾಜಕೀಯ ಒತ್ತಡವನ್ನು ಹಾಕಿದಲ್ಲಿ ಮ್ಯಾಪ್ ತ್ವರಿತವಾಗಿ ಮಾಡಲು ಸಾಧ್ಯ ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಮಾತನಾಡಿ, ಪುತ್ತೂರಿನಲ್ಲಿ ಹಿಂದೆ ಸಿದ್ದ ಮಾಡಿದ ಯುಜಿಡಿ ಯೋಜನೆಯಲ್ಲಿ 16 ವೆಟ್’ವೆಲ್’ಗಳಿತ್ತು. ಸರ್ವೇ ಸೇರಿ ಅಗತ್ಯ ವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟವರಲ್ಲಿ ತಕ್ಷಣ ಮಾಡಿಸಲಾಗುವುದು. ಅಶ್ವಿನಿ ಸರ್ಕಲ್’ನಿಂದ ದರ್ಬೆ ಸರ್ಕಲ್ ಹಾಘೂ ಬೆದ್ರಾಳ ರಸ್ತೆಯ ಪಕ್ಕದಲ್ಲಿ ಪುಟ್’ಪಾತ್, ಸೈಕಲ್ ಪಾತ್, ಪಾರ್ಕಿಂಗ್ ಸ್ಥಳ, ಬಸ್ ಬೇ ಸೇರಿ ಅಗತ್ಯ ವ್ಯವಸ್ಥೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅರ್ಬನ್ ಲ್ಯಾಂಡ್ ಟ್ರಾನ್ಸ್,ಪೋರ್ಟ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಯೋಜನೆಯಲ್ಲಿ ಭೂಸ್ವಾಧೀನಕ್ಕೆ ಅಗತ್ಯ ಅನುದಾನ ಲಭ್ಯವಿರುವುದಿಲ್ಲ. ಮಾಡೆಲ್ ರಸ್ತೆಯಾಗಿ ಮಾಡುವುದರಿಂದ ಬಳಿಕ ಹೆಚ್ಚಿನ ಅನುದಾನ ತರಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಜಲಸಿರಿ ಯೋಜನೆಯ ಕಾರ್ಯಪಾಲಕ ಅಭಿಯಂತರ ಕುಮಾರ ಸ್ವಾಮಿ ಉಪಸ್ಥಿತರಿದ್ದರು.