ಪುತ್ತೂರು: ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಪುತ್ತೂರು ತಾಲೂಕು ಆಡಳಿತ ಸೌಧದ ಮುಂಭಾಗ ಶನಿವಾರ ಪ್ರತಿಭಟನೆ ನಡೆಯಿತು.
ಕುಂಬ್ರ ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ಮಜ್ದೂರ್ ಸಂಘದ ತಾಲೂಕು ಸಮಿತಿ ನೇತೃತ್ವ ವಹಿಸಿಕೊಂಡಿತ್ತು.
ಕಾರ್ಮಿಕರ ಸುಮಾರು ಒಂದು ಲಕ್ಷ ಮಕ್ಕಳಿಗೆ ಇನ್ನೂ ವಿದ್ಯಾರ್ಥಿ ವೇತನ ಬಂದಿಲ್ಲ. ವಿವಿಧ ಪಿಂಚಣಿಯನ್ನು ಕಡಿತ ಮಾಡಲು ಮುಂದಾಗಿರುವುದರಿಂದ ಕಾರ್ಮಿಕರಿಗೆ ಸಮಸ್ಯೆಯಾಗುತ್ತದೆ. ಉಪಯೋಗವಿಲ್ಲದ ಕಳಪೆ ದರ್ಜೆಯ ಕೆಲಸದ ಸಾಮಾಗ್ರಿಗಳ ವಿತರಣೆಯನ್ನು ಕೈಬಿಡಬೇಕು. ಕಾರ್ಮಿಕರ ವಸತಿ ಯೋಜನೆಗೆ ಸಾಲ ಮತ್ತು ಸಹಾಯಧನ ತಕ್ಷಣ ಒದಗಿಸಬೇಕು ಎನ್ನುವ ಬೇಡಿಕೆ ಸೇರಿದಂತೆ ಸುಮಾರು ಹತ್ತು ಬೇಡಿಕೆಗಳ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.
ರಾಜ್ಯ ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ಜಯರಾಜ್ ಸಾಲಿಯಾನ್ ಬೆಳ್ತಂಗಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ, ಕುಂಬ್ರ ವಲಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ, ಸಂಘಟನಾ ಕಾರ್ಯದರ್ಶಿ ಜಯಂತ ಪೂಜಾರಿ ಕುಂಬ್ರ, ಈಶ್ವರಮಂಗಲ ವಲಯದ ದಯಾನಂದ ಗೌಡ, ಕೇಶವ, ಆರ್ಲಪದವು ವಲಯದ ದಿವಾಕರ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.