– ವಿನೋದ್ ಕೆ. ಕರ್ಪುತ್ತಮೂಲೆ
ಪುತ್ತೂರು: ಹಲವು ಕನಸುಗಳನ್ನು ಹೊದ್ದು ಮಲಗಿದ್ದ ಪುಟ್ಟ ಊರು ಪಂಜಿಗ. ನರಿಮೊಗರು ಗ್ರಾ.ಪಂ.ನ ತೆಕ್ಕೆಯಲ್ಲಿರುವ ಪಂಜಿಗದಲ್ಲಿ ಕಿಂಡಿಅಣೆಕಟ್ಟು ಸಹಿತ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪಂಜಿಗ ಜನರ ಕನಸು ಮತ್ತೆ ಗರಿಗೆದರತೊಡಗಿವೆ.
ಆನಡ್ಕ – ಶಾಂತಿಗೋಡು ನಡುವಿನ ಪಂಜಿಗ ಮೊದಲು ಹೀಗಿತ್ತು – ರಸ್ತೆ ಸಂಪರ್ಕವೇ ಇಲ್ಲ. ಪಕ್ಕದಲ್ಲಿ ಹರಿಯುವ ಹೊಳೆಗೆ ಹರುಕಲು – ಮುರುಕಲು ಪುಟ್ಟ ಕಾಲು ಸಂಕ. ಪಟ್ಟಣ ತಲುಪಬೇಕಾದರೆ ಹತ್ತಾರು ಕಿ.ಮೀ. ದೂರ ಸಾಗಬೇಕು. ರಿಕ್ಷಾ ಹಿಡಿಯಬೇಕಾದರೆ ಇನ್ನೊಂದಷ್ಟು ದೂರ ನಡೆಯಬೇಕು. ವಿದ್ಯಾರ್ಥಿಗಳಿಗೆ, ದಿನನಿತ್ಯ ಕಚೇರಿಗಳಿಗೆ ಹೋಗುವವರಿಗೆ ನಿತ್ಯ ಕಿರುಕುಳ. ಮಳೆಗಾಲವೋ ಯಮರಾಜನಂತೆ.
ಈ ಎಲ್ಲಾ ಸಮಸ್ಯೆಗಳು ಇಲ್ಲಿವರೆಗೆ ಇತ್ತು. ಆದರೆ ಇನ್ನಿಲ್ಲ.
ಇದಕ್ಕೆ ಕಾರಣ, ಪಂಜಿಗದಲ್ಲಿ ನಿರ್ಮಾಣವಾದ ಕಿಂಡಿಅಣೆಕಟ್ಟು ಸಹಿತ ಸೇತುವೆ. ಸಣ್ಣ ನೀರಾವರಿ ಇಲಾಖೆಯಡಿ ಕಿಂಡಿಅಣೆಕಟ್ಟು ನಿರ್ಮಿಸುವ ಪ್ರಸ್ತಾಪ ಶಾಸಕ ಸಂಜೀವ ಮಠಂದೂರು ಅವರ ಮುಂದೆ ಬಂದಿತ್ತು. ಆದರೆ ಪಂಜಿಗ ಹಾಗೂ ಸುತ್ತಮುತ್ತಲಿನ ಜನರ ಭವಣೆ ಅರಿತಿದ್ದ ಶಾಸಕರು, ಕಿಂಡಿಅಣೆಕಟ್ಟು ಸಹಿತ ಸೇತುವೆ ಪಂಜಿಗದಲ್ಲಿ ನಿರ್ಮಾಣ ಆಗಬೇಕು ಎಂದು ಪಣತೊಟ್ಟರು. ಯೋಜನೆಯ ಹಿಂದೆ ಬಿದ್ದು, 1.95 ಕೋಟಿ ರೂ.ನ ಯೋಜನೆಯ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಇಂದು ಕಾಮಗಾರಿ ಅಂತಿಮಗೊಳ್ಳುತ್ತಿದೆ. ತಡೆಗೋಡೆಯ ಒಂದಷ್ಟು ಕಾಮಗಾರಿಯಷ್ಟೇ ಬಾಕಿ ಉಳಿದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಕೆಲ ತಿಂಗಳುಗಳಲ್ಲಿಯೇ ಸೇತುವೆ ಜನರ ಸಂಪರ್ಕಕ್ಕೆ ತೆರೆದುಕೊಳ್ಳಲಿದೆ. ಇದರೊಂದಿಗೆ, ಪಂಜಿಗ ಜನರ ಒಂದೊಂದು ಕನಸುಗಳಿಗೂ ಜೀವ ತುಂಬಲಿದೆ.
ಅಂತರ್ಜಲ ವೃದ್ಧಿಗೆ ಕಿಂಡಿಅಣೆಕಟ್ಟು ಪೂರಕ ಎನ್ನುವುದು ನಿಮಗೆ ತಿಳಿದಿರುವ ಸಂಗತಿ. ಕಿಂಡಿಅಣೆಕಟ್ಟು ನಿರ್ಮಾಣವಾದ ಬಳಿಕ, ಕೆಲ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯೇ ಇಲ್ಲ ಎನ್ನುವ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಇದು ಪಂಜಿಗ ಸುತ್ತಮುತ್ತಲಿನ ಹತ್ತಾರು ಕಿಲೋ ಮೀಟರ್ ವ್ಯಾಪ್ತಿಯ ಜನರಿಗೆ ಸಿಗುವ ಪರೋಕ್ಷ ಪ್ರಯೋಜನವಾದರೆ, ಸಂಪರ್ಕ ಸೇತುವೆ ಪ್ರತ್ಯಕ್ಷವಾಗಿ ಹಾಗೂ ನೇರವಾಗಿ ಜನರಿಗೆ ಸಿಕ್ಕ ವರವಾಗುವುದರಲ್ಲಿ ಎರಡು ಮಾತಿಲ್ಲ.
ಕಿಂಡಿಅಣೆಕಟ್ಟು ಸಹಿತ ಸೇತುವೆಯ ಪ್ರಯೋಜನ:
- ಈಗ ಆನಡ್ಕ – ಚಿಕ್ಕಮುಡ್ನೂರು ನಡುವಿನ ಅಂತರ ಕೇವಲ 4 ಕಿಲೋ ಮೀಟರ್. ಮೊದಲು ಆನಡ್ಕದಿಂದ ಚಿಕ್ಕಮುಡ್ನೂರಿಗೆ ಬರಬೇಕಾದರೆ ಪುತ್ತೂರಿಗೆ ಬಂದೇ ಹೋಗಬೇಕಿತ್ತು. ಅಂದರೆ 19 ಕಿಲೋ ಮೀಟರ್ ದೂರದ ಪ್ರಯಾಣ ಇಂದು 4 ಕಿ.ಮೀ.ಗೆ ಇಳಿಕೆಯಾಗಿದೆ.
- ಪ್ರಸಿದ್ಧ ಯಾತ್ರಾ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಇದು ಸುಲಭದ ಬಳಸು ದಾರಿ. ಪುತ್ತೂರು – ನೆಕ್ಕಿಲಾಡಿ ನಡುವಿನ ಜನರು ಪೇಟೆಯನ್ನು ತಪ್ಪಿಸಿಕೊಂಡು ಈ ದಾರಿಯಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಬಹುದು.
- ಆನಡ್ಕದಿಂದ ಪುತ್ತೂರಿಗೆ ಬರಬೇಕಾದರೆ ನಿಗದಿತ ಬಸ್ಸನ್ನೇ ಕಾಯಬೇಕು. ಆದರೆ ಚಿಕ್ಕಮುಡ್ನೂರಿಗೆ ಬಂದರೆ, ರಿಕ್ಷಾ ಸೇರಿದಂತೆ ಬೇಕಾದಷ್ಟು ವಾಹನಗಳು ಸಿಗುತ್ತವೆ. ಸೇತುವೆಯಿಂದಾಗಿ ಇದು ಸಾಧ್ಯವಾಗಿದೆ.
- ಪಂಜಿಗ ಪ್ರದೇಶದಲ್ಲಿ ಸುಮಾರು 40ರಿಂದ 50 ಮನೆಗಳಿವೆ. ಈ ಮನೆಗಳಿಗೆ ರಸ್ತೆಯೇ ಇಲ್ಲ. ಸೇತುವೆಯಿಂದಾಗಿ ಈ ಮನೆಗಳವರ ರಸ್ತೆ ಕನಸು ಮತ್ತೆ ಚಿಗುರಿದೆ.
- ಮಳೆಗಾಲದಲ್ಲಿ ತುಂಬಿ ಹರಿಯುವ ಪಂಜಿಗ ಸಮೀಪದ ಈ ಹೊಳೆಗೆ ಅನೇಕ ಮಂದಿ ಬಲಿಯಾದ ನಿದರ್ಶನವಿದೆ. ಮುಂದೆ ಇಂತಹ ಅವಘಡಗಳಿಗೆ ಅವಕಾಶವಿಲ್ಲ.
- ಈ ರಸ್ತೆಯಲ್ಲಿ ಸಿಗುವ ಪಂಜಿಗದಂತಹ ಅನೇಕ ಊರುಗಳು ಮುಂದಿನ ದಿನದಲ್ಲಿ ಪಟ್ಟಣವಾಗಿ ಬೆಳೆದರೂ ಆಶ್ಚರ್ಯವಿಲ್ಲ.
ಶಾಸಕರ ಪ್ರಯತ್ನ, ಮುತುವರ್ಜಿ
ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆ, ಉಳಿದ ಸಮಯಗಳಲ್ಲಿ ಬತ್ತಿ ಹೋದರೂ ಸಂಪರ್ಕ ಕಷ್ಟವೇ ಆಗಿತ್ತು. ಇದೀಗ ಕಿಂಡಿಅಣೆಕಟ್ಟು ಸಹಿತ ಸೇತುವೆ ನಿರ್ಮಾಣವಾಗಿರುವುದರಿಂದ ಪುರುಷರಕಟ್ಟೆ – ಚಿಕ್ಕಮುಡ್ನೂರು – ಪಂಜಿಗ – ಆನಡ್ಕ ನಡುವಿನ ಪ್ರದೇಶ ಜನಸಂಚಾರ ಹಾಗೂ ವಾಹನ ಸಂಚಾರಕ್ಕೆ ಯೋಗ್ಯವಾಗಿದೆ. ವಿದ್ಯಾರ್ಥಿಗಳು, ದಿನನಿತ್ಯ ಕೆಲಸಕ್ಕೆ ಹೋಗುವವರು ಈ ಸೇತುವೆಯ ಮೂಲಕ ತೆರಳುವುದರಿಂದ, ತಮ್ಮ ಸಮಯವನ್ನು ಉಳಿಸಬಹುದು. ಶಾಸಕ ಸಂಜೀವ ಮಠಂದೂರು ಅವರ ಪ್ರಯತ್ನದಿಂದ, ಮುತುವರ್ಜಿಯಿಂದ ಸೇತುವೆ ಕಾಮಗಾರಿ ನಡೆದಿದ್ದು, ಕೊನೆಹಂತದ ಕಾಮಗಾರಿಯಷ್ಟೇ ಬಾಕಿ ಉಳಿದಿದೆ.
– ದಿನೇಶ್ ಪಂಜಿಗ, ತಾಲೂಕು ಸಂಚಾಲಕ್, ಹಿಂದೂ ಜಾಗರಣಾ ವೇದಿಕೆ