ಪುತ್ತೂರು: ಪುತ್ತೂರು – ಉಪ್ಪಿನಂಗಡಿ ಮುಖ್ಯರಸ್ತೆಯಿಂದ ಹಾರಾಡಿ ರೈಲ್ವೇ ರಸ್ತೆ ಪ್ರವೇಶಿಸುವಲ್ಲಿಯೇ ಚರಂಡಿಯೊಂದು ಬಾಯ್ದೆರೆದು ನಿಂತಿದ್ದು, ಲೋಕೋಪಯೋಗಿ ಇಲಾಖೆ ತಾತ್ಕಾಲಿಕ ತಡೆ ನಿರ್ಮಿಸಿದೆ.
ಮುಖ್ಯರಸ್ತೆಯಲ್ಲೇ ಬಾಯ್ದೆರೆದು ನಿಂತಿದ್ದ ಅಪಾಯದ ಬಗ್ಗೆ ‘ನ್ಯೂಸ್ ಪುತ್ತೂರು’ ಅಕ್ಟೋಬರ್ 5ರಂದು ವರದಿ ಮಾಡಿತ್ತು. ವರದಿಗೆ ತಕ್ಷಣ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ತನ್ನ ಸಿಬ್ಬಂದಿಗಳ ಮೂಲಕ ತಾತ್ಕಾಲಿಕ ತಡೆ ಬೇಲಿ ನಿರ್ಮಿಸಿದೆ.
ಮಾತ್ರವಲ್ಲ, ಮುರಿದು ಹೋಗಿದ್ದ ಚರಂಡಿಯ ಭಾಗಕ್ಕೆ ಮರಳು ತುಂಬಿದ್ದ ಚೀಲಗಳನ್ನಿಡಲಾಗಿದೆ. ಇದರಿಂದ ವಾಹನಗಳು ಸಂಚರಿಸುವಾಗ ರಸ್ತೆ ಬದಿಗೆ ಬಂದರೂ, ಯಾವುದೇ ಅಪಾಯ ಎದುರಾಗದು.
ಬಾಯ್ದೆರೆದು ನಿಂತಿದ್ದ ಅಪಾಯದಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಮಾತ್ರವಲ್ಲ ಚತುಶ್ಚಕ್ರ ಹಾಗೂ ಘನ ವಾಹನಗಳು ಅಪ್ಪಿ – ತಪ್ಪಿ ರಸ್ತೆ ಬದಿಗೆ ಬಂದರೆ, ಚರಂಡಿಗೆ ಬೀಳುವ ಆತಂಕ ಇತ್ತು. ಇದೀಗ ಬೇಲಿ ಕಟ್ಟಿ, ಅದಕ್ಕೆ ಕೆಂಪು ಪಟ್ಟಿಯ ರಿಬ್ಬನ್ ಹಾಕಿರುವುದರಿಂದ, ಅಪಾಯದ ಸೂಚನೆ ನೀಡಿದಂತಾಗಿದೆ.
ಶಾಶ್ವತ ಪರಿಹಾರದ ಭರವಸೆ:
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಿಂದ ರಸ್ತೆ ಅಭಿವೃದ್ಧಿ ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಅಂತಿಮ ಹಂತದಲ್ಲಿದ್ದು, ಜಾರಿಯಾದಾಗ ಶಾಶ್ವತ ಪರಿಹಾರ ಸಿಗಲಿದೆ. ಶೀಘ್ರ ಜಾರಿಯಾಗುವ ವಿಶ್ವಾಸವಿದೆ.
ಬಿ. ರಾಜಾರಾಮ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಪುತ್ತೂರು