ನಗರಸಭಾ ವ್ಯಾಪ್ತಿಯಲ್ಲಿ ಬಾಕಿ ಇರುವ ಉದ್ಯಮ ಪರವಾನಿಗೆ, ತೆರಿಗೆ, ನೀರಿನ ಶುಲ್ಕ ವಸೂಲಾತಿಗೆ ತಮಟೆ ಬಡಿದು ಚಾಲನೆ | ಸಿಬ್ಬಂದಿಗಳಿಂದ ಮನೆ ಮನೆ ಭೇಟಿ ನೀಡಿ ನೋಟೀಸ್ ಮೂಲಕ ಎಚ್ಚರಿಕೆ

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡ ತೆರಿಗೆ, ಉದ್ಯಮ ಪರವಾನಿಗೆ, ನೀರಿನ ಶುಲ್ಕ ಇತ್ಯಾದಿ ತೆರಿಗೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ ನಗರಸಭೆಯಿಂದ 31 ವಾರ್ಡ್‌ಗಳಲ್ಲಿ 15 ದಿನಗಳ ತೆರಿಗೆ ವಸೂಲಾತಿ ಆಂದೋಲನಕ್ಕೆ ಗುರುವಾರ ಚಾಲನೆ ನೀಡಲಾಯಿತು. ನಗರಸಭೆಯ ಪ್ರತಿ ವಾರ್ಡ್‌ಗಳಿಗೂ ನಗರಸಭೆ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಬಾಕಿದಾರರಿಗೆ ನೋಟೀಸ್ ನೀಡಿ ಎಚ್ಚರಿಕೆ ನೀಡಲಿದ್ದಾರೆ.

ನಗರಸಭೆ ಕಚೇರಿ ವಠಾರದಲ್ಲಿ ಆಂದೋಲನಕ್ಕೆ ತಮಟೆ ಬಡಿದು ಚಾಲನೆ ನೀಡಿದ ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಮಾತನಾಡಿ, ನಗರಸಭೆ ಪ್ರತಿ ವಾರ್ಡ್‌ಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ವಾರ್ಡ್‌ಗಳಲ್ಲಿ ಪರಿಶೀಲನೆ ನಡೆಸಿ ಬಾಕಿದಾರರನ್ನು ಜಾಗೃತಿಗೊಳಿಸಲಿದ್ದಾರೆ. ಬಾಕಿ ಮಾಡಿದವರಿಗೆ ನೋಟಿಸ್ ನೀಡುವ ಕಾರ್ಯ ಮಾಡಲಿದ್ದಾರೆ. ಈ ನಡುವೆ ಪ್ರತಿ ವಾರ್ಡ್‌ಗಳ ಗಲ್ಲಿಗಲ್ಲಿಯಲ್ಲೂ ವಾಹನದ ಮೂಲಕ ತಮಟೆ ಬಡಿಯುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದೆ ಎಂದರು.

ನಗರಸಭೆಯ ಎಲ್ಲಾ ಕಾಮಗಾರಿಗಳು, ಕೆಲಸ ಕಾರ್ಯಗಳಿಗೆ ತೆರಿಗೆ ಹಣವನ್ನೇ ಬಳಕೆ ಮಾಡಲಾಗುತ್ತದೆ. ಈಗಾಗಲೇ ರಾಜ್ಯ ಸರಕಾರದ ವತಿಯಿಂದ ಆದೇಶ ಮಾಡಿರುವಂತೆ ಶೇ. 100ರಷ್ಟು ತೆರಿಗೆ ವಸೂಲಾತಿ ಜನವರಿ ತಿಂಗಳ ಒಳಗೆ ಮಾಡಬೇಕಾಗಿದೆ. ಅದಕ್ಕಾಗಿ ಆಂದೋಲನ ಹಮ್ಮಿಕೊಂಡಿದ್ದೇವೆ. ಮುಂದಿನ ದಿನ ರಾಜ್ಯ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆ ಆಗಬೇಕಾದರೂ ಶೇ. 100ರಷ್ಟು ನಮ್ಮ ತೆರಿಗೆ ವಸೂಲಾತಿ ಆದರೆ ಮಾತ್ರ ನಮಗೆ ಅನುದಾನ ಬಿಡುಗಡೆಯಾಗಬಹುದು. ಈ ನಿಟ್ಟಿನಲ್ಲಿ 15 ದಿನಗಳ ಆಂದೋಲನದಲ್ಲಿ ನಾಗರಿಕರು ಬಾಕಿ ತೆರಿಗೆಯನ್ನು ಪಾವತಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನ ತೆರಿಗೆ ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದರು.



































 
 

ನಗರಸಭೆ ಸದಸ್ಯ ಯುಸೂಪ್ ಡೀಮ್, ಕಂದಾಯ ನಿರೀಕ್ಷಕ ರಾಜೇಶ್, ಬಿಲ್ ಕಲೆಕ್ಟರ್ ಪುರುಷೋತ್ತಮ, ರೇಣುಕಾ ಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ಕರುಣಾಕರ್, ಸಿ.ಆರ್. ದೇವಾಡಿಗ, ರವಿಪ್ರಕಾಶ್, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್, ವರಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.
ನಗರಸಭೆಯ ವಿವಿಧ ಕಡೆ ರಾಧಾಕೃಷ್ಣ ಅವರು ತಮಟೆ ಬಾರಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top